ನಿನ್ನ ಮರ್ಜಿಗೆ ನಾನು ಊಹುಂ ಎನಲಾರೆ..
ಆರೇಳು ಫೋಟೆತ್ತರದ ಭಡ ದೇಹ
ಗಂಜಿಯ ನೆಳದಂತೆ
ಗಟಾರದಲ್ಲಿ
ಭಿಡೆ ಬಿಟ್ಟು
ಕೂಳು, ಕಸ, ಕಫ ಒಂದೂ ನೋಡದೆ
ನೆಕ್ಕಿ ಮುಕ್ಕಿ ಮೆಲುಕುವ,,
ಮನುಷ್ಯರಂತೆ ನಟಿಸಿ ನುಲಿಯುವ
ಧಣಿಗಳ
ಎಂದೂ ಹೊರಡದ ದನಿಗಳು ನಾವು..
ಜೀ ಹುಜೂರ್ ಎಂದು
ನಾವೇ ತೊಡಿಸಿದ ಹುಜೂರಿಕೆಯ ಪಟ್ಟ
ಬಾಗಿದರೆ ಬಿದ್ದೀತೆಂದು
ಭದ್ರವಾಗಿ ಅತ್ತಿತ್ತ ಕಾಣದಷ್ಟೂ
ಅಲ್ಲಾಡದೆ ನಡೆದು,
ರಾಜಕೀಯದ ರೇಂಪಲ್ಲಿ(ramp) ಥಕದಿಮಿಸುವ
ಖಾದಿಯೊಳಗಣ
ಬೆತ್ತಲು ದೇಹ ಕೊಬ್ಬಿದ್ದು
ಕಂಡೀತು ಹೇಗೆ,,,
ಇರುವ ಎರಡೇ ಕಣ್ಣಿಗೆ
ಯಾರ ತಾತನ ಗಂಟೆಂಬ ಔದಾಸ್ಯದ
ಪೊರೆ ಬಂದ ಮೇಲೆ..!!
ಬೀಡಿ ಕೊಂಡ ಮುದುಕಪ್ಪನಿಗೆ
ಬತ್ತಿ ಹೊಸೆದ ಹಳೇ ಮುದುಕಿಗೆ
ಟ್ಯಾಕ್ಸು, ರೆವೆನ್ಯೂ, ಎಕ್ಸ್ಪೆಂಡೀಚರ್ರು ಎಲ್ಲಾ
ಬ್ರಹ್ಮನ ಕಗ್ಗಂಟು,
ಇವೆಲ್ಲಾ ಭೋಗಸ್ಸೆಂದು
ಸರ್ಕಾರಕ್ಕೊಂದಿಷ್ಟು ಗೊಣಗಿ
ಮುರುಟಿ ಮಲಗುವ
ಮಹಾಪೌರನ
ಪಾಯಿಖಾನೆಯಷ್ಟೇ ಖಾಸು ಎನಿಸಿದ
ರಟ್ಟಾದ ಗುಟ್ಟು ಇದು.
ಪ್ರಜಾಪ್ರಭುತ್ವ::::
ಜನರು ಜನರಿಂದ ಜನರಿಗಾಗಿ
ಮಾಡುವ ಧೋಕಾ,,
ಮಾಯಾಲೋಕ..
ರಾಜಕಾರಣಿ, ಕಾರಿಣಿಯರ
ಮಾತಿನರಮನೆಗಳ ಸಾಲಲ್ಲಿ
ನನ್ನದೆಂಬ ಒಂದು ಗುಡಿಸಲೂ ಇಲ್ಲ
ಎಲ್ಲವೂ ಪ್ರಜೆಗಳನ್ನು ಪ್ರಭುವಾಗಿಸಿದವರ ಲೀಲೆ
ಜೊತೆಗೆ
ಹೆಸರಿಗಷ್ಟೇ ಪ್ರಜೆಯೇ ಪ್ರಭುವೆಂಬ
ಪಟ್ಟ ಹಣೆಯ ಮೇಲೆ..!!
ನಾನು ಧನ್ಯ..
ನೀನೂ ಧನ್ಯ..
ನಾವೆಲ್ಲರೂ ಕೃತಜ್ಞರೇ ನಿಮಗೆ..
ಅಹುದಹುದು..
ಮೂರು ಮಂಗಗಳ ಪೈಕಿಯಲ್ಲೇ
ನಮ್ಮಗಳ ಆಯ್ಕೆ,,
ನಾನು ಕಣ್ಣು ಕಾಣದ ಮಂಗ
ಇವ ಕಿವಿ ಕೇಳದ ಮಂಗ
ನಿಮ್ಮ ನಿಮ್ಮ ಆಯ್ಕೆ ನಿಮಗೇ ಬಿಟ್ಟಿದ್ದು..
ಸ್ವತಂತ್ರ್ಯ ಭಾರತದಲ್ಲಿ ಇಷ್ಟಾದರೂ
ಸ್ವಾತಂತ್ರ್ಯವಿರದಿದ್ದರೆ ಹೇಗೆ..??
ಓಹೋ,,,
ಇದಕ್ಕೂ ಬೇಸರವೇ ನನ್ನೊಡೆಯಾ?????
ಹೋಗಲಿಬಿಡು
ಬೇಕಾದರೆ ನೀನೇ
ವಿಂಗಡಿಸಿ ಪಂಗಡಿಸಿಬಿಡು ನಮ್ಮ
ನಿನ್ನ ಮರ್ಜಿಗೆ ನಾನು ಊಹುಂ ಎನಲಾರೆ..
(infact ನಾವ್ಯಾರೂ ಊಹುಂ ಎನಲಾರೆವು)
21 comments:
ನಮ್ಮ ಸೋಲುಗಳ, ರಾಜಕಾರಣಿಗಳ ಗೆಲುವಿನ ..ನಾಮಕೆವಾಸ್ತೆ ಪ್ರಜಾಪ್ರಭುತ್ವದ ಯಥಾವತ್ ದರ್ಶನ...ಕವನದಲ್ಲಿ ಜಾಗತಿಕ ದರ್ಶನ ಮಾಡಿಸಿದ್ದೀರಿ. ಧನ್ಯವಾದ
ನಮ್ಮ ಪ್ರಜಾಪ್ರಭುತ್ವದ failure ಅನ್ನು ತುಂಬ ಚೆನ್ನಾಗಿ
ವಿಡಂಬಿಸಿದ್ದೀರಿ.
ಸಾಗರಿ
ದೇಶ ಎತ್ತ ಸಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ
ಒಂದೆಡೆ ಆರ್ಥಿಕತೆ ಸುಭದ್ರವಾಗುತ್ತಿದೆ
ಇನ್ನೊಂದೆಡೆ ಬಡತನ ಹೆಚ್ಚುತ್ತಿದೆ
ಸುಂದರವಾಗಿ ತಿಳಿಸಿದ್ದಿರಿ
ವಿಡ೦ಬನೆ ಚೆನ್ನಾಗಿದೆ..
ನಮ್ಮ ಪ್ರಜಾಪ್ರಭುತ್ವದ ಸಧ್ಯದ ಪರಿಸ್ಥಿತಿಯ ಸೂಕ್ತ ವಿಡ೦ಬನೆ ಚೆನ್ನಾಗಿ ಮಾಡಿದ್ದಿರಾ ಕವನದಲ್ಲಿ. ನಾವು ಗಾ೦ಧಿಜಿಯ ಮೂರು ಮ೦ಗಗಳೊ೦ದಾಗುವ ಎಕೈಕ ಹಕ್ಕಿರುವ ಸಾಲು ಮತ್ತು ಪ್ರಜಾಬ್ರಭುತ್ವದ "ಧೋಕಾ" ಸಾಲುಗಳು ತು೦ಬಾನೆ ಇಷ್ಟವಾಯಿತು.
'ಸಾಗರಿ..' ಅವ್ರೆ..,
ವಾಸ್ತವದಲ್ಲಿರುವ ಪರಿಸ್ಥಿತಿಯ ಮೇಲೆ ನೈಜ ದರ್ಶನದಂತೆ ಅಕ್ಷರದ ಹಗ್ಗ ಹೊಸೆದಿದ್ದೀರಿ..
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
Strange but naked truth.... :(
ಶಂಭು ಲಿಂಗ ಅವರೇ,
ನಮ್ಮ ಮೂರ್ಖತೆಯನ್ನು ತೋರಿಸಲು ಕವನವೇನು ದೊಡ್ಡ ಪ್ರಬಂಧವೂ ಸಾಲದೇನೋ!! ಕವನವನ್ನು ಓದಿದ್ದಕ್ಕೆ, ಮತ್ತು ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.
ಕಾಕಾ ಅವರೇ,
ನಮ್ಮದೇ ಹಣ ಪೋಲು ಮಾಡುತ್ತಿರುವ ರಾಜಕಾರಣಿಗಳು, ಗಲಾಟೆ ದೊಂಬಿ ಅಂತ ನಮ್ಮದೇ ಆಸ್ತಿ(ಸಾರ್ವಜನಿಕ ಆಸ್ತಿ)ಯನ್ನು ನಾಶ ಮಾಡುವ ಪ್ರಜೆಗಳು... ಪ್ರಜಾಪ್ರಭುತ್ವದ ಗಮ್ಮತ್ತು,, ಏನೇ ಆದರೂ always believe in democracy ;-)
ಗುರು ಅವರೇ,
ಜಗತ್ತಿನ ಅತೀ ದೊಡ್ಡ ಶ್ರೀಮಂತರ ಸಾಲಿಗೆ ಸೇರುವ ಭಾರತೀಯರೂ ಇದ್ದಾರೆ, ಕಡು ಬಡವರು ನಮ್ಮಲ್ಲಿ ಇನ್ನೂ ಹೆಚ್ಚಿದ್ದಾರೆ, ಸಂಪತ್ತಿನ ಅಸಮಾನ ಹಂಚಿಕೆಯಾಗಿದೆಯಷ್ಟೇ!! ಸರಿಪಡಿಸೋಕೆ ಸಾಧ್ಯ ಅಂತೀರಾ????
ಮನಮುಕ್ತಾ ಅವರೇ,
ಕವನವನ್ನು ಓದಿದ್ದಕ್ಕೆ ಮತ್ತು ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು
ಸೀತಾರಾಮ್ ಸರ್,
ಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.. ನಮ್ಮಲ್ಲಿ ಸಾಧರಣಕ್ಕೆ ಸುಧಾರಣೆ ಆಗುವಂತಹ ಪರಿಸ್ಥಿಯಂತೂ ಇಲ್ಲ. ಅಧಿಕಾರ ಸಿಕ್ಕ ಮೇಲೆ ಎಲ್ಲರೂ ಒಂದೇ ದೋಣಿಯ ಕಳ್ಳರೇ..!
ಗುರು ದೆಸೆ ಅವರೇ,
ಧನ್ಯವಾದಗಳು. ನಿಮ್ಮ ಮನಸಿನ ಮನೆಗೆ ಭೇಟಿ ಇತ್ತು ಬಂದಿದ್ದೇನೆ. ಚೆನ್ನಾಗಿ ಬರೆಯುತ್ತೀರಿ.
ವಿನಯ್ ಅವರೇ,
ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು
ತು೦ಬಾ ಚನ್ನಾಗಿದೆ...ಕವಿತೆ
ಪ್ರಜಾಪ್ರಭುತ್ವದ ಕನ್ನಡಿಯ ಕೊಳಕನ್ನು..ಹುಳುಕನ್ನು..ಕವಿತೆಯಲ್ಲಿ ನೈಜವಾಗಿ ತೆರೆದಿಟ್ಟಿದ್ದೀರ..
ಸಾಗರೀ ಯವರೆ ...
ಕವನ ಚೆನ್ನಾಗಿದೆ .. ರಾಜಕೀಯದ ಹುಳುಕುಗಳನ್ನು , ಪ್ರಜಾಪ್ರಭುತ್ವದ ನ್ಯುನ್ಯತೆಗಳನ್ನು
ಚೆನ್ನಗಿ ವಿವರಿಸಿದ್ದಿರಿ.
ಚುಕ್ಕಿ ಚಿತ್ತಾರ ಅವರೇ,
ಕವನವನ್ನು ಓದಿ ಸ್ಪಂದಿಸಿದ್ದಕ್ಕೆ ಧನ್ಯವಾದಗಳು.
ಶ್ರೀಧರ್ ಅವರೇ,
ನಿಮಗೂ ಕೂಡ ಧನ್ಯವಾದಗಳು. ನನ್ನ ಬ್ಲಾಗಿಗೆ ನಿಮಗೆ ಸ್ವಾಗತ ಕೂಡ.
ತುಂಬಾ ಚೆನ್ನಾಗಿದೆ. ವಿಡಂಬನೆ ಸತ್ಯವಾಗಿದ್ದರೂ ಒಪ್ಪಿಕೊಳ್ಳುವಾಗ ತುಂಬಾ ಕಷ್ಟವಾಗುತ್ತದೆ. ನಿಜ ಎಂದೂ ಕಹಿಯಾಗಿಯೇ ಇರುತ್ತದೆಯಂತೆ. ಆದರೆ ಇಲ್ಲಿ ಕಹಿಯನ್ನು ನಿಜವಾಗಿಯೂ ನುಂಗುತ್ತಿದ್ದೇವೆ ಅದೂ ಕಮಕ್ ಕಿಮಕ್ ಅನ್ನದೇ!
ಸಾಗರಿಯವರೇ ನಗ್ನ ಸತ್ಯಗಳನ್ನು ಅಷ್ಟೇ ಧೀಟಾಗಿ ನಗ್ನಗೊಳಿಸಿ ಮುಲಾಜಿಲ್ಲದೇ ಬಿಂಬಿಸುವ ನಿಮ್ಮ ಪ್ರಸ್ತಾವನಾ ಧಾಟಿ ಮೆಚ್ಚುಗೆಯಾಯಿತು...ನಿಜ ನಾವು ಅತಿ ಶ್ರೀಮಂತ ಮತ್ತು ಅತಿ ಬಡವರ ಮಧ್ಯೆ ಹಂಚಿಹೋಗಿದ್ದೇವೆ ಅನಿಸುತ್ತಿದೆ...Polarised society ಆಗುತ್ತಿದೆಯೇ ಎನ್ನುವ ಭಯ ಕಾಡುತ್ತಿದೆ...ಒಬ್ಬರ ಭಾವನೆ ಇನ್ನೊಬ್ಬರಿಗೆ ಅರ್ಥವಾಗದಷ್ಟು ದೂರವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು...
ತೇಜಸ್ವಿನಿಯವರೇ ಹಾಗೂ ಆಜಾದ್ ಸರ್ ಅವರೇ,
ಮಗುವಿನ ಅನಾರೋಗ್ಯದ ಕಾರಣದಿಂದಾಗಿ ಬ್ಲಾಗ್ ಕಡೆ ಮುಖ ಮಾಡಿ ಮಲಗಲೂ ಸಾಧ್ಯವಾಗಿಲ್ಲ. ಅದಕ್ಕೇ ತಡವಾಗಿ ಪ್ರತಿಕ್ರೀಯೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
Post a Comment