Wednesday, June 23, 2010

ನೆರೆ-ಹೊರೆ(ಸ್ವಲ್ಪ ಜಾಸ್ತಿಯೇ ಹೊರೆ!!)

ನೆರಮನೆ


ನೆರಮನೆಯ
ಕಾಂಪೌಂಡು
ನಮ್ಮ ಮನೆಯ ಕಸದ ತೊಟ್ಟಿ,
ಯಾರೂ
ಕಣ್ಣಿಗೆ ಬೀಳದಿದ್ದಾಗ
ಉದುರಿದ ಒಣ ಎಲೆ, ಹಕ್ಕಿ ಪಿಷ್ಟಿ,
ಕಿಗ್ಗು ತೆಗೆದ ಹತ್ತಿ ಉಂಡೆ
ಚಾಕಲೇಟು ಸಿಪ್ಪೆ, ತರಕಾರಿ ಸೊಪ್ಪೆ
ಎಲ್ಲವನ್ನೂ
ಕಣ್ಣುಮುಚ್ಚಿ ಎಸೆಯಬಹುದಾದ
ಸುರಕ್ಷಿತ ಜಾಗ..

ನೆರಮನೆ,,
ನನ್ನವಳ ಕೋಪಗೃಹ
-ಅಡಿಗೆ ಮನೆಗೆ ಕಾಲಿಡದ ಹಠ ಹೂಡಿ
ಬಿಮ್ಮನೆ ಬಾಗಿಲೆರಸಿ
ಸುಲಭವಾಗಿ ನುಸುಳಿಕೊಳ್ಳಲು ಸಿಗುವ
ಅಡಗು ತಾಣ
ಒಂದೇ ಮಾತಲ್ಲಿಡುವುದಾದರೆ
ನೆರಮನೆಯಲ್ಲಿ ನನ್ನವಳ
ಉಪವಾಸ ಸತ್ಯಾಗ್ರಹ,,
ವ್ಯತ್ಯಾಸವಿಷ್ಟೇ
ಉಪವಾಸ ನನಗೆ
ಸತ್ಯಾಗ್ರಹಅವಳಿಗೆ.

ನೆರಮನೆ,,
ಹರಟೆ ಹೊಡೆಯಲು ಹವಣಿಸಿ
ಹಸಿದ
ಅತೃಪ್ತ ಆತ್ಮಗಳಿಗೆ
ದಿವ್ಯ ಸನ್ನಿಧಿ.
ತೂತಾಗದ ಕಿವಿ, ಒಡೆಯದ ಬಾಯಿ
ಹೊಂದಿರುವವರ
ಅತ್ಯದ್ಭುತ ಲೋಕ..

ಹ್ಹೆ,,ಹ್ಹೀ ನಮ್ಮದೂ ಅದೇ ಕುಟುಂಬ..
?
?
ನಮ್ಮನೆಯೂ ಇಲ್ಲೊಬ್ಬರ
ನೆರಮನೆಯೇ ಸರಿ..!

ವಿಗ್ರಹವಾಕ್ಯ ಬಿಡಿಸಿ ಸಮಾಸ ಹೆಸರಿಸಿದರೆ
ನೆರ(ರೆ)ಮನೆ= ಈಗಲೋ ಆಗಲೋ ಮುಳುಗಿಸುವ(ಮುಳುಗಿಸಲು ಹೊಂಚಿರುವ) ನೆರೆಯಲ್ಲಿರುವ ಮನೆ
ಷಷ್ಟಿ ತತ್ಪುರುಷ ಸಮಾಸ.

(ವ್ಯಾಕರಣಕಾರರ ಕ್ಷಮೆಕೋರಿ.)

Wednesday, June 9, 2010

ನನ್ನ ಪುಂಗಿ

ಹೊ(ತೆ)ಗಳಿಕೊಳ್ಳುವವರೇ ನಿಮಗೊಂದು ಕಿವಿ ಮಾತು..ಹಿಂದೊಂದು ಕಾಲದಲ್ಲಿ ಎಂದರೆ ತುಂಬಾ ಹಿಂದೆ ಹೋಗಬೇಕಿಲ್ಲ,,, ಈಗ್ಗೆ ಸುಮಾರು ೭-೮ (ಅಥವಾ ೪-೫)ವರ್ಷಗಳ ಹಿಂದೆ ಹೇಳಿಕೊಳ್ಳಲೂ ಮುಜುಗರಪಡುವ ಸಂಗತಿ ಈಗ ಹೆಮ್ಮೆಯ ವಿಷಯವಾಗಿದೆ ಎಂದರೆ ನಂಬ್ತೀರಾ???

ಕಾಲೇಜು ಹುಡುಗ/ಹುಡುಗಿಗೆ boy friend/girl friend ಇದ್ದಾನೆ/ಇದ್ದಾಳೆ ಅಂತಾದ್ರೆ ಆ ಕಾಲದಲ್ಲಿ ಹೆತ್ತವರು ತಲೆ ತಗ್ಗಿಸಿಯೆ ಓಡಾಡ್ತಿದ್ರು. ಈಗ ಅದು ಘನತೆಯ ವಿಷಯವಾಗಿದೆ. counts ಹೆಚ್ಚಿದಂತೆ ಘನತೆಯೂ ಹೆಚ್ಚು!! drinksನಂತಹ ಚಟಗಳ ವಿಷಯದಲ್ಲೂ ಹಾಗೆಯೇ.. ಪಾರ್ಟಿಯಲ್ಲಿ ಶರಾಬೀ ಝಲಕ್, ಹುಡುಗಿಯರ ಬಳುಕು ಇಲ್ಲದಿದ್ದರೆ ಅಂತಹ ಪಾರ್ಟಿಗಳಿಗೆ ಕಿಮ್ಮತ್ತೇ ಇಲ್ಲ. ಪಬ್ಬುಗಳಲ್ಲಿ, ಪಾರ್ಕುಗಳಲ್ಲಿ open romance ಗಳಿಗೂ ಈಗ ಭಾರೀ ಬೆಲೆ ಬಂದಿದೆ. ಇವೆಲ್ಲ ಇನ್ನು ಮುಂದೆ ಭಾರತೀಯ ಸಂಸ್ಕೃತಿಯಲ್ಲಾಗಬೇಕಾದ ಮಹತ್ತರ ammendment ಏನೋ!!!

ಹಮ್.. ನಾನೀಗ ಹೇಳಲು ಹೊರಟಿದ್ದು ಇದಲ್ಲ. ಮುಚ್ಚಿಟ್ಟುಕೊಳ್ಳಬೇಕಾದ ವಿಷಯವನ್ನು ಬಾಯ್ಬಿಟ್ಟು ಕೊಚ್ಚಿಕೊಳ್ಳುವ(infact ಕೊಚ್ಚಿಹೋಗುವ) ಮಂದಿಯದ್ದು. ಇದೊಂದು ಹೊಸಾ trend. ಮೇಲ್ವರ್ಗದವರಂತೂ ಬಿಡಿ,, ಮಧ್ಯಮ ಮತ್ತು ಕೆಳವರ್ಗದವರಲ್ಲೂ ಇದು ಈಗಿನ hottest and latest running trend.

ನನ್ನ ಮಗಳಿಗೆ/ತಂಗಿಗೆ/ಮೊಮ್ಮಗಳಿಗೆ ಅಡಿಗೆಯ ಗಂಧಗಾಳಿಯೂ ಇಲ್ಲ(ನನ್ನ ಮಗಳಿಗೆ/ತಂಗಿಗೆ/ಮೊಮ್ಮಗಳಿಗೆ ಅಡಿಗೆಯ ಗಂಧಗಾಳಿನೂ ಇಲ್ಲೆ)

ಮದುವೆ ವಯಸ್ಸಿಗೆ ಬಂದ್ರೂ ಹುಡುಗಿ ಇನ್ನೂ ಅಡಿಗೆ ಮನೆಗೆ ಕಾಲಿಟ್ಟಿಲ್ಲ ಕಣ್ರಿ(ಮದುವೆ ವಯಸ್ಸಿಗೆ ಬಂತಲೆ ಕೂಸು,, ಇನ್ನೂ ಅಡಿಗೆ ಮನೆಗೆ ಹೇಳಿ ಕಾಲಿಟ್ಟಿದ್ದಲ್ಲ ಮಾರಾಯ್ತಿ..)

ಇಷ್ಟು ವರ್ಷ education ಅಂತಾಯ್ತು, ಈವಾಗ jobಊ ಪಾಪ ಅಡಿಗೆ ಕಲಿಯೋಕೆ time ಎಲ್ಲಿದೆ.

ನಾನಿಲ್ಲ ಅಂದ್ರೆ ನನ್ ಮಗಳು ಹಸಿದುಕೊಂಡೆ ಇರ್ತಾಳೆ ಬಿಟ್ರೆ ಅವಳಿಗೆ ಅಡಿಗೆ ಎಲ್ಲಿ ಬರತ್ತೆ ಅಂತ ಮದುಮಗಳ ತಾಯಿ ಮಾತು..

ಇದ್ನೆಲ್ಲ ನೀವು ಅಲವತ್ತುಕೊಳ್ಳುವಿಕೆಯೋ ಅಥವಾ ದುಃಖದ ಮಾತೋ ಅಂತ ತಿಳಿದರೆ ತಪ್ಪಾದೀತು.. ಇವೆಲ್ಲಾ ಹೊಗಳಿಕೆಯ ಮಾತುಗಳು. ಬ್ಲಾಗಿನ ಲೋಕದಿಂದ ಮತ್ತು ಬೆಂಗಳೂರಿನಿಂದ ದೂರವಿದ್ದು ಒಂದು ತಿಂಗಳ ಮೇಲಾಯಿತಲ್ಲ,, ಮದುವೆ ಸೀಸನ್ನು ಮುಗಿಸಿ ಬರುವಾಗ ಮದುವೆಗೆ ಬಂದ ಮದುವೆ ವಯಸ್ಸಿನ ಹೆಣ್ಣು ಮಕ್ಕಳ ಅಮ್ಮಂದಿರ ಮಾತು ಕೇಳಿ ಎಂತಾ ಜಮಾನಾ ಬಂದಿದೆ ಅಂತ ಯೋಚಿಸುತ್ತ ಕುಳ್ಳುವಂತಾಯ್ತು ನನಗೆ. ಒಬ್ಬರಿಗಿಂತ ಒಬ್ಬರು ಜಂಬದಿಂದ ಅಡಿಗೆಯ ಅ ಆ ಇ ಈ ತಿಳಿಯದ ಮುದ್ದು ಹೆಣ್ಣು ಮಕ್ಕಳ ಬಗ್ಗೆ ಶೋಕಿಯಿಂದ ಜಂಬಕೊಚ್ಚಿಕೊಳ್ಳುತ್ತಿದ್ದರು. ಕೊಚ್ಚಿಕೊಳ್ಳುವ ಪರಿ ನೋಡಿಯೇ ಆನಂದಿಸಬೇಕು.

ತುಂಬಾ ಹಿಂದೆ ಹೋಗಿ ದಣಿಯಬೇಕೆಂದಿಲ್ಲ, ಬರೀ ೪-೫ ವರ್ಷಗಳ ಹಿಂದೆಅಡಿಗೆ ಬಾರದ ಹೆಣ್ಣು ಎಂದರೆ ಲೆಕ್ಕಕ್ಕೆ ಬೇಡಾ ಎನ್ನುವಂತಹ ಸ್ಥಿತಿ. ಹಾಡು-ಹೂ ಬತ್ತಿ, ರಂಗೋಲಿ ಯಾವುದೂ ಬೇಡಾ ಬಿಡಿ ಆದರೆ ಹೊಟ್ಟೆಗೆ ಹಿಟ್ಟನ್ನು ಬೇಯಿಸಲು ಬೇಕಾದ ಕನಿಷ್ಟ ತಿಳುವಳಿಕೆಯೂ ಇಲ್ಲದಂತೆ ಮಾಡಿದ್ದು ಯಾವುದಿರಬಹುದು?? ಹೆತ್ತವರ ಒಣಜಂಬ, ಪ್ರತೀಷ್ಠೆ, ಅತೀ ಪ್ರೀತಿ ಅಷ್ಟೆ. ಎಂತಹ ಪರಿಸ್ಥಿಯಲ್ಲೂ ಇದ್ದು ಜಯಿಸಿ ಬರಬೇಕಾದಂತೆ ಮಕ್ಕಳನ್ನು ಸಾಕಬೇಕಾದ ಪಾಲಕರೇ, ತಾಯಿ ಮನೆಯಲ್ಲಿ ಇಲ್ಲದಿದ್ದರೆ ಹಸಿವೆಯಿಂದ ಹಾಗೆಯೇ ಮಲಗುವಷ್ಟು ಪರಾವಲಂಬಿಗಳನ್ನಾಗಿ ಮಾಡ್ತಿದ್ದಾರೆ!! ಈಗಿನ ಹುಡ್ಗೀರೂ ತಾವು ಅಡಿಗೆ-ಕೆಲಸ ಕಲಿತರೆ ಗಂಡಿಗಿಂತ ಕಡಿಮೆ ಎನ್ನುವ ಭಾವನೆ ಬೆಳೆಸಿಕೊಳ್ತಿದ್ದಾರೆ.

ದೊಡ್ಡ-ಸಣ್ಣ ಕೆಲಸಕ್ಕೆ ಹೋಗುವ ಹುಡ್ಗೀರಷ್ಟೇ ಅಲ್ಲ ಮನೆಗೆಲಸ-ಕೂಲಿಯನ್ನೇ ಆಧಾರವಾಗಿಟ್ಟುಕೊಂಡು ಬದುಕುವ ಮಂದಿಯದ್ದೂ ಇದೇ ಕತೆ. ಮೊನ್ನೆ ನಮ್ಮನೆ ಕೆಲಸದಾಕೆ ಹೇಳ್ತಾ ಇದ್ಲು-"ಮುಂದಿನ ತಿಂಗ್ಳು ನನ್ ಎರಡನೇ ಮಗ್ಳ ಮದುವೆ" ಅಂತ. ಅದಕ್ಕೆ ನಾ ಕೇಳಿದೆ-"ಓಹೊ, ಹಾಗದ್ರೆ ಅಡಿಗೆ ಮನೆ training ಜೋರು ಅನ್ನು. ಎಲ್ಲಾ ಕಲ್ತಿದ್ದಾಳಾ?" ಅವಳು "ಅಯ್ಯ್.. ಈಗ ಅದ್ನೆಲ್ಲಾ ಯಾರು ಕಲೀತಾರೆ, ಹಕ್ಕಿಗೆ ಹಾರೋದು ಹೇಳಿಕೊಡಬೇಕಾ,, ಮದ್ವೆ ಆದ್ಮೇಲೆ ತಾನಾಗಿಯೇ ಕಲಿತಾಳೆ. ನಿಮ್ಗೇನು ಮದ್ವೆಗಿಂತಾ ಮುಂಚೆ ಅಡಿಗೆ ಮಾಡ್ಲಿಕ್ಕೆ ಬರ್ತಿತ್ತಾ?" ಅಂತ ಸವಾಲೆಸೆದಳು. ನಾನು "ಶಿವಮ್ಮಾ,, ನಾನು ನನ್ ತಮ್ಮ ಪೇಟೆಯಲ್ಲಿ room ಮಾಡಿಕೊಂಡು ಕಾಲೇಜಿಗೆ ಹೋಗುವಾಗ ಅಡಿಗೆ ಮಾಡೋದು, ಪಾತ್ರೆ ಬಟ್ಟೆ ತೊಳೆಯೋದು, ಬಳಿಯೋದು ಎಲ್ಲಾ ನಾನೇ ಮಾಡ್ಕೊಂಡು ಓದ್ಕೋಬೇಕಿತ್ತು" ಅಂತ ಹೇಳಿ ಮಾತು ಮುಗಿಸಿದ್ದೆ. ನಾನು ಓದು ಮುಗಿಸಿ ೪ ವರ್ಷ ಕೂಡ ಸರಿ ಆಗಿಲ್ಲ ಜನರ ಯೋಚನೆ, ಅವರ style ಎಷ್ಟೊಂದು ಬದಲಾಗಿಬಿಟ್ಟಿದೆ.. ಮೈಮುರಿದು ದುಡಿಯುವವರೆ ಕೆಲಸ ಮಾಡುವುದು/ಕಲಿಯುವುದು ಅವಮಾನ ಅಂತ ತಿಳಿಯುತ್ತಿರಬೇಕಾದರೆ ಮೇಲ್ವರ್ಗ ಮತ್ತು ಮಧ್ಯಮ ವರ್ಗದವರಲ್ಲಿ ಈ trend ಅದೆಷ್ಟು fast ಇರಬೇಡ.

ಯಾವುದಾದರು ತಾಯಿ "ನನ್ನ ಮಗ ಕೆಲಸಕ್ಕೇ ಹೋಗಲ್ಲ, ದುಡಿಯುವುದು ಅಂದ್ರೆ ಅವನಿಗೆ ಆಗೋದೇ ಇಲ್ಲ" ಅಂದ್ರೆ ಆ ಮಗನ ಬಗ್ಗೆ ಕೇಳಲೂ ನಮಗೆಷ್ಟು ಕಿರಿಕಿರಿ.. ಹಾಗೆಯೇ ಅಡಿಗೆಯೇ ಬರಲ್ಲ ಎಂದುಕೊಚ್ಚಿಕೊಳ್ಳುವ ತಾಯಂದಿರನ್ನು ಕಂಡಾಗಲೂ ಮೈ ಪರಚಿಕೊಳ್ಳುವಂತಾಗುತ್ತದೆ. ಮುಂದೊಂದು ದಿನ "ಮಗ ದುಡಿಯಲ್ಲ" ಅಂತ ಹೊ(ತೆ)ಗಳಿಕೊಳ್ಳುವುದೂ ಒಂದು trend ಆಗಬಹುದು.

ಇತ್ತೀಚೆಗೆ ನಮ್ಮ ಹುಡುಗರೇ ಭಾರೀ ರುಚಿ ಅಡಿಗೆ ಮಾಡೊದನ್ನ ಕಲ್ತಿದ್ದಾರ್ರಿ.. ಹೊರಗಡೆ ಕೆಲಸಕ್ಕೆ ಹೋಗಿಬಂದೂ ಮನೆಯಲ್ಲಿ ಕೂಳುಬೇಯಿಸಿಕೊಂಡು ತಿಂತಿದ್ದಾರೆ. ಆದರೆ ಯಕೋ ಹೆಣ್ಣುಮಕ್ಕಳು ಮಾತ್ರ ಎಲ್ಲದರಲ್ಲೂ ಮುಂದಿರಬೇಕೆಂದು ಬಯಸುವವರು ಅಡಿಗೆ ಕಲಿಯಲು ಸಂಕೋಚಪಡುತ್ತಿದ್ದಾರೋ??

ಪ್ರಸಂಗ ಬಂದಾಗ ತಾನಾಗಿಯೇ ಅಡಿಗೆ ಕಲೀತಾರೆ/ಮದುವೆಯಾದ್ಮೇಲೆ ಒಂದೊಂದೇ ಕಲೀತಾರೆ ಅನ್ನುವ ಮಾತೂ ಇದೆ. ಎಲ್ಲಾ ಸರಿ ಆದ್ರೆ ಮದ್ವೆಗಿಂತ ಮುಂಚೆ ಅಡಿಗೆ ಕಲಿತರೆ ತೊಂದರೆ ಎಂಥಾದ್ದು? ಗಂಡಂದಿರಿಗೆ ಏನೂ ಬರಲ್ಲ ಎಂಬ ಡೌಲಿನ ಹೆಂಡತಿಗಿಂತ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಹೆಂಡತಿಯೇ ಇಷ್ಟವಾಗ್ತಾಳೆ.ಮುಂದೊಂದು ದಿನ "ನಿಮ್ಮಮ್ಮ ಇದನ್ನೂ ಹೇಳಿಕೊಡ್ಲಿಲ್ವಾ" ಎಂಬ ಮಾತು ಬಂದು ಲಡಾಯಿ ಆಗಬಾರದಲ್ಲ ಅಂತ ಹೇಳಿದೆ ಅಷ್ಟೆ. ಹೊರ ಕೆಲಸಕ್ಕೆ ಹೋಗುವ ಮಹಿಳೆಯರೂ ಅಡಿಗೆ ಕಲಿತಿದ್ದರೆ ಆದಷ್ಟು ಬೇಗ ಅಡಿಗೆ ಮುಗಿಸುವ ಮತ್ತು ಗಂಡನಿಂದ ಸರಿಯಾಗಿ help ಪಡೆಯುವ ಕಲೆ ಕರಗತ ಮಾಡ್ಕೋಬಹುದು..

ಕೂಸು ಬರ್ಜರಿ ಓದ್ತು/ನೌಕರಿಯಲ್ಲಿದ್ದು ಅದಕ್ಕೆ ಅಡಿಗೆ ಮನೆಗೆ ಕಾಲಿಡಲೂ ಪುರುಸೊತ್ತಿಲ್ಲ ಎಂದು ಹೇಳಿಸಿಕೊಳ್ಳುವುದಕ್ಕಿಂತಲೂ ಎಷ್ಟೆಲ್ಲಾ ಓದಿಕೊಂಡು/ನೌಕರಿಗೆ ಹೋಗಿಬಂದು ಅಡಿಗೇನೂ ಚೆನ್ನಾಗಿ ಮಾಡ್ತು ಎನ್ನಿಸಿಕೊಳ್ಳಿವುದೇ ಒಂದು ತೂಕ ಜಾಸ್ತಿ ಅಲ್ಲವೇ?? ಈ ಮಾತು ಮನಸ್ಸಿಗೆ ಬಂದಿಲ್ಲವೆಂದರೆ atleast ಎಲ್ಲರೆದುರು ಕೆಲಸಬರದ ಕೂಸನ್ನು ಹೊ(ತೆ)ಗಳುವುದನ್ನಾದರೂ ಬಿಡಿ,, ನಿಮ್ಮ ಹಿಂದೆ ಆಡಿಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾದೀತು!!