Showing posts with label ಸಾಗರಿಯ ಹನಿಗಳು. Show all posts
Showing posts with label ಸಾಗರಿಯ ಹನಿಗಳು. Show all posts

Tuesday, August 31, 2010

ಸಾಗರದ ಹನಿಗಳು.



1.ತೆರೆ(ಅಲೆ) ಮರೆಯ ಮಾತು

ಅಲೆಗಳ ಬಳುಕಲ್ಲಿ
ಮಲೆಗಳ ನೆನಪಲ್ಲಿ
ತನದೇ ಹೆಜ್ಜೆಯನರಸುವ
ನದಿಗಳ ಕಳವಳ, ಕಲರವವೆಲ್ಲ
ಭೋರ್ಗರೆದು
ನೊರೆ ನೊರೆಯ ತೆರೆಯಾಗಿ
ಹಿಂದೆ ಮುಂದಾಡಿ ಸ್ತಬ್ಧವಾಗುವವು.



2.ಸಂಗಮ

ನದಿಯು ತನ್ನ ಸಿಹಿಯ ನೀಡಿ
ಕಡಲ ಉಪ್ಪ ತಾನು ಹೀರಿ
ಒಬ್ಬರಲ್ಲೊಬ್ಬರು ಅಭೇದ್ಯವಾಗಿ ಕರಡಿ
ಪ್ರಕೃತಿಯ ಲೇಣ-ದೇಣ
ವ್ಯವಹಾರದ ಕೂಡಿಕೆಯ ಬಿಂದುವಲ್ಲಿ
ಸಂಧಿಸುತ್ತಾರೆ.


3.ಬೆಸ್ತ

ಹೆಣೆದ
ಬಲೆಯಲ್ಲಿ
ಬದುಕ ಹಿಡಿವಾತ..

Monday, March 1, 2010

ಕುಮಟೆಯ ಹನಿಗಳು

ಕುಮಟೆಯ ಕವನಗಳು..

-೧-
ಕರಿಕಾಳ ಅಮ್ಮನವರಿಗೆ
ಹರಕೆ ಹೊತ್ತ
ಆ ಹುಡುಗಿಯ
ಮನಸ್ಸಲ್ಲೇನಿದ್ದೀತು,,,
ತನಗೊಂದು ಒಳ್ಳೇ ವರ,
ಅಣ್ಣನಿಗೊಂದು ದಕ್ಕದ ಕೆಲಸ,
ತಮ್ಮನಿಗೆ ಮೆಡಿಕಲ್ಲು ಸೀಟು,
ಅಮ್ಮನ ಆಪರೇಷನ್ನಿಗೊಂದಿಷ್ಟು ದುಡ್ಡು
ಅಥವಾ
ನಮೆಯುತ್ತಾ ನರಳುತ್ತಿರುವ ಅಪ್ಪನಿಗೆ
ಮುಕ್ತಿ...

-೨-
ಮಾರಲಿಕ್ಕಿಟ್ಟ
ಬಂಗ್ಡೆ, ತಾರ್ಲಿ, ಫೇಡೆ, ಪಾಂಪ್ಲೀಟುಗಳ
ಸಾಲಲ್ಲಿ ಕುಂತ
ಒಬ್ಬ ಹರಿಕಾಂತರ ಪೋರ...

-೩-
ಅಘನಾಶಿನಿ, ಮಾಸೂರು
ಬೊಗರಿಬೈಲು, ಮುರೂರು
ಹೆಗಡೆ, ಕೂಜಳ್ಳಿ
ಬಸ್ಸುಗಳನ್ನೆಲ್ಲಾ
ಹತ್ತಿಳಿದು
ಒಂದು ಅಯ್ಸ್ ಕ್ಯಾಂಡಿಯಾದರೂ
ವ್ಯಾಪಾರವಾಗಿ
ಕಾಸು ಸಿಗಲಿ
ಎಂದು ಕಾತರಿಸುವ
ಬೊಕ್ಕೆಯೆದ್ದ ಪಾದದ
ಬರಿಗಾಲ
ಕರಿ ಹುಡುಗ...

-೪-
ಕುಟ ಕುಟಿ ಲೂನಾ ಏರಿ
ಪ್ರತಿದಿನ
ಕುಮಟೆಗೆ ಬರುವ
ಅಜ್ಜನ ಕೈ ಚೀಲದಲ್ಲಿದ್ದಿದ್ದು
ಮೊಮ್ಮಕ್ಕಳಿಗೆಂದು ಕೊಂಡ
ಲಿಂಬೆ ಹುಳಿ ಪೆಪ್ಪರಮಿಂಟು
ಮತ್ತು
ಕರಗುತ್ತಿರುವ
ಕುಮಟೆ ಸ್ಪೇಷಲ್ ಗಡಬಡ್...

-೫-
ಕಡಲ ಒಡನಾಟದಿಂದ ದೂರವಿದ್ದೂ
ಕಡಲ ಕುಮಟೆಯನ್ನೇ
ಕನಸಿಸುವ
ಕುಮಟೆಯ ಕೂಸು
ಈ ಸಾಗರಿ...