Tuesday, March 23, 2010

believe in democracy :-) :-) :-)

ನಿನ್ನ ಮರ್ಜಿಗೆ ನಾನು ಊಹುಂ ಎನಲಾರೆ..ಆರೇಳು ಫೋಟೆತ್ತರದ ಭಡ ದೇಹ
ಗಂಜಿಯ ನೆಳದಂತೆ
ಗಟಾರದಲ್ಲಿ
ಭಿಡೆ ಬಿಟ್ಟು
ಕೂಳು, ಕಸ, ಕಫ ಒಂದೂ ನೋಡದೆ
ನೆಕ್ಕಿ ಮುಕ್ಕಿ ಮೆಲುಕುವ,,
ಮನುಷ್ಯರಂತೆ ನಟಿಸಿ ನುಲಿಯುವ
ಧಣಿಗಳ
ಎಂದೂ ಹೊರಡದ ದನಿಗಳು ನಾವು..

ಜೀ ಹುಜೂರ್ ಎಂದು
ನಾವೇ ತೊಡಿಸಿದ ಹುಜೂರಿಕೆಯ ಪಟ್ಟ
ಬಾಗಿದರೆ ಬಿದ್ದೀತೆಂದು
ಭದ್ರವಾಗಿ ಅತ್ತಿತ್ತ ಕಾಣದಷ್ಟೂ
ಅಲ್ಲಾಡದೆ ನಡೆದು,
ರಾಜಕೀಯದ ರೇಂಪಲ್ಲಿ(ramp) ಥಕದಿಮಿಸುವ
ಖಾದಿಯೊಳಗಣ
ಬೆತ್ತಲು ದೇಹ ಕೊಬ್ಬಿದ್ದು
ಕಂಡೀತು ಹೇಗೆ,,,
ಇರುವ ಎರಡೇ ಕಣ್ಣಿಗೆ
ಯಾರ ತಾತನ ಗಂಟೆಂಬ ಔದಾಸ್ಯದ
ಪೊರೆ ಬಂದ ಮೇಲೆ..!!

ಬೀಡಿ ಕೊಂಡ ಮುದುಕಪ್ಪನಿಗೆ
ಬತ್ತಿ ಹೊಸೆದ ಹಳೇ ಮುದುಕಿಗೆ
ಟ್ಯಾಕ್ಸು, ರೆವೆನ್ಯೂ, ಎಕ್ಸ್ಪೆಂಡೀಚರ್ರು ಎಲ್ಲಾ
ಬ್ರಹ್ಮನ ಕಗ್ಗಂಟು,
ಇವೆಲ್ಲಾ ಭೋಗಸ್ಸೆಂದು
ಸರ್ಕಾರಕ್ಕೊಂದಿಷ್ಟು ಗೊಣಗಿ
ಮುರುಟಿ ಮಲಗುವ
ಮಹಾಪೌರನ
ಪಾಯಿಖಾನೆಯಷ್ಟೇ ಖಾಸು ಎನಿಸಿದ
ರಟ್ಟಾದ ಗುಟ್ಟು ಇದು.

ಪ್ರಜಾಪ್ರಭುತ್ವ::::
ಜನರು ಜನರಿಂದ ಜನರಿಗಾಗಿ
ಮಾಡುವ ಧೋಕಾ,,
ಮಾಯಾಲೋಕ..


ರಾಜಕಾರಣಿ, ಕಾರಿಣಿಯರ
ಮಾತಿನರಮನೆಗಳ ಸಾಲಲ್ಲಿ
ನನ್ನದೆಂಬ ಒಂದು ಗುಡಿಸಲೂ ಇಲ್ಲ
ಎಲ್ಲವೂ ಪ್ರಜೆಗಳನ್ನು ಪ್ರಭುವಾಗಿಸಿದವರ ಲೀಲೆ
ಜೊತೆಗೆ
ಹೆಸರಿಗಷ್ಟೇ ಪ್ರಜೆಯೇ ಪ್ರಭುವೆಂಬ
ಪಟ್ಟ ಹಣೆಯ ಮೇಲೆ..!!
ನಾನು ಧನ್ಯ..
ನೀನೂ ಧನ್ಯ..
ನಾವೆಲ್ಲರೂ ಕೃತಜ್ಞರೇ ನಿಮಗೆ..

ಅಹುದಹುದು..
ಮೂರು ಮಂಗಗಳ ಪೈಕಿಯಲ್ಲೇ
ನಮ್ಮಗಳ ಆಯ್ಕೆ,,
ನಾನು ಕಣ್ಣು ಕಾಣದ ಮಂಗ
ಇವ ಕಿವಿ ಕೇಳದ ಮಂಗ
ನಿಮ್ಮ ನಿಮ್ಮ ಆಯ್ಕೆ ನಿಮಗೇ ಬಿಟ್ಟಿದ್ದು..
ಸ್ವತಂತ್ರ್ಯ ಭಾರತದಲ್ಲಿ ಇಷ್ಟಾದರೂ
ಸ್ವಾತಂತ್ರ್ಯವಿರದಿದ್ದರೆ ಹೇಗೆ..??

ಓಹೋ,,,
ಇದಕ್ಕೂ ಬೇಸರವೇ ನನ್ನೊಡೆಯಾ?????
ಹೋಗಲಿಬಿಡು
ಬೇಕಾದರೆ ನೀನೇ
ವಿಂಗಡಿಸಿ ಪಂಗಡಿಸಿಬಿಡು ನಮ್ಮ
ನಿನ್ನ ಮರ್ಜಿಗೆ ನಾನು ಊಹುಂ ಎನಲಾರೆ..
(infact ನಾವ್ಯಾರೂ ಊಹುಂ ಎನಲಾರೆವು)

Wednesday, March 17, 2010

ಮರೆತ ನೆನಪುಗಳ ಮೇಲೊಂದು ಕವನ

ನೆನಪುಗಳೇ ನೀವೇಕೆ ಹೀಗೆ???

ನೆನಪುಗಳೇ,
ಈ ಬದುಕಿಗೆ
ಹಳೆಯ ನೆನಪುಗಳ ಮತ್ತದೇ ಮುನ್ನುಡಿ
ಬರೆಯದಿರಿ!!

ಬಿದ್ದ ಹೂವಿಗೆ
ಗಿಡವೆಂದೂ ಭೂತ,
ಗತಿಸಿದ್ದು
ತಿದ್ದಲಾಗದ ಬರಹ ಮಾತ್ರ.

ಪೂರ್ವ ಉತ್ತರವೋ, ಆಗ್ನೇಯ ಈಶಾನ್ಯವೋ
ಮನದ ಯಾವುದೋ ದಿಕ್ಕಿನಲ್ಲಿ
ಜಿರಲೆ ಕುಂಟೆ,
ಒಂದಿಷ್ಟು ಬಿಂಜಲುಗಳ ನಡುವೆ ಹೂತ
ದ್ರೌಪದಿಯ ಸೀರೆಯಂತೆ
ಸೆಳೆದಷ್ಟೂ ರೂಪುಗೊಳ್ಳುವ
ನೆನಪಿನ ಸರ
-ಮಾಲೆಗಳೇ
ಹೊತ್ತುಗೊತ್ತಿಲ್ಲದೆ
ನನ್ನಾವರಿಸಿ ಮಜ ನೋಡುವುದ
ಬಿಟ್ಟುಬಿಡಿ.

ನೆನಪುಗಳ ಪುಟಗಳನ್ನೆಲ್ಲ
ಹಳೆ ಪುಸ್ತಕದಂತೆ
ರದ್ದಿಗೆ ಕೊಟ್ಟು
ಹಗುರಾಗಿ ಹಾಯಾಗೋಣವೆಂದರೆ
ರದ್ದಿಯಾತನೂ ತೂಗಿದ
ಪುಟಗಟ್ಟಲೆ ಇರುವ ನೆನಪಿನ
ಪುಸ್ತಕವ..!!
ತೂಗಿ ತೂಗಿ ದಣಿವಾಗಿ
'ಬೇಡಮ್ಮ ನಿಮ್ಮ
ರದ್ದಿ,
ಕೊಡುವಷ್ಟು ಕಾಸಿಲ್ಲ,
ಪುಗಸಟ್ಟೆ ಕೊಟ್ಟೇನೆಂದರೂ
ಹೊತ್ತೊಯ್ಯಲು
ಬೆನ್ನಲ್ಲಿ ಕಸುವಿಲ್ಲ'
ಎಂದ.

ಮಂಕಾದೆ ಅವನ ಕೊಂಕಿಗೆ
ಮತ್ತೆ
ಹೊಂಚ ತೊಡಗಿದೆ
ನೆನಪುಗಳನ್ನೆಲ್ಲಾ ಹರಿದು ಹಂಚಿಬಿಡಲು..

ಒಮ್ಮೆಯಂತೂ
ದಿನ, ವಾರ, ತಿಂಗಳು ಕಳೆದು ವರ್ಷವೇ
ಕೂತೆ
ನೆನಪುಗಳ ಸುಟ್ಟಿಬಿಡಲು.
ಸುಟ್ಟೂ ಸುಟ್ಟು ಶಾಖಕೆ
ನಾ ಕರಕಲಾದೆ
ಮಶಿ ಇಂಗಾಳದಂತೆ.
ಆದರೂ ನಿಟ್ಟುಸಿರಿಟ್ಟಿದ್ದೆ ಪಾರಾದೆನೆಂದು,,,,

ನಿನ್ನೆ
ರಾತ್ರಿ ರಾಣಿಯ
ಸವಿಗಂಪ ತಾಳಲಾರದೆ
ಕಿಟಕಿಯಲ್ಲಿ ಇಣುಕಿದರೆ
ನೆನಪುಗಳ
ಬೂದಿಯಲ್ಲಿ
ಬೆಳದೊಂದು ಹೂವಿನ ಗಿಡ
ಘಮ ಘಮಿಸುವ ಹೂವ
ಹೊತ್ತು
ಸತ್ತ ನೆನಪುಗಳಿಗೆ
ಜೀವ ತುಂಬಿ
ಈ ಬದುಕಿಗೆ
ಹಳೆಯ ನೆನಪುಗಳ ಮತ್ತದೇ ಮುನ್ನುಡಿ
ಬರೆಯುತ್ತಿತ್ತು...


((((ತೇಜಸ್ವಿನಿಯವರೇ,
ನನ್ನ ನಿಜವಾದ ಹೆಸರು ಸಾಗರಿಯೂ ಅಲ್ಲ, ಚಿನ್ಮಯಿಯೂ ಅಲ್ಲ. ಸಾಗರಿಯ ಮೇಲೆ ಬಿದ್ದ ಚಿನ್ಮಯಿಯ ಸ್ವಗತಗಳ ಛಾಯೆಯೇ ನಾನು. ನನ್ನ ವಿವರವನ್ನು ಹೀಗೆ ಗೌಪ್ಯವಾಗಿ ಇಟ್ಟಿದ್ದಕ್ಕೆ ಕ್ಷಮಿಸಿ, ಆದರೂ ಕೆಲವು ಕಡೆ ನನ್ನ ಊರು, ಭಾಷೆ, ಹೆಸರಿನ ಹಿಂಟುಗಳನ್ನು ಇಟ್ಟಿದ್ದೇನೆ.
ಹುಟ್ಟೂರಿಗೆ ಅಚಾನಕ್ಕಗಿ ತೆರಳಿದ ಕಾರಣದಿಂದಾಗಿ ತಮ್ಮೆಲ್ಲರಿಗೂ ಸ್ವಲ್ಪ ತಡವಾಗಿ ಯುಗಾದಿಯ ಶುಭಾಷಯಗಳನ್ನು ಕೋರುತ್ತೇನೆ..(ಯುಗಾದಿಯನ್ನು ಉಗಾದಿ ಅಂತ ಕರ್ಯೋದ್ಯಾಕೆ?? ಗೊತ್ತಿದ್ದವರು ತಿಳಿಸಿ.) ))))


Monday, March 8, 2010

ಹೀಗೂ ಒಂದು ಪತ್ರ
ಮಗನಿಗೊಂದು ಪತ್ರ.


ಮಗೂ,
ಮುಂದೆಂದೂ ಬರೆಯಲಾಗದೇನೋ ಎನ್ನಿಸಿ ನಿನಗೆ ಈ ಪತ್ರವನ್ನು ಈಗಲೇ ಬರೆತ್ತಿದ್ದೇನೆ. ನನ್ನ ಜೀವವೇ ನೀನಾಗಿರುವಾಗ ಎದುರಿಗೆ ನೀ ನಿಂತು ಕೇಳಿದರೂ ಮಾತಲ್ಲಿ ನಾ ಹೇಳಬಲ್ಲೆ ಎಂಬ ನಂಬಿಕೆ ಇಲ್ಲದ ಕೆಲವು ಭಾವನೆಗಳನ್ನ ಪತ್ರದಲ್ಲಿ ಬರೆದಿರುವೆ. ಸಾವಧಾನವಾಗಿ ಓದಿಕೋ. ದೇವರು ನಿನಗೆ ಒಳ್ಳೆಯ ಆಯುಷ್ಯ, ಆರೋಗ್ಯ, ನೆಮ್ಮದಿ ಕೊಟ್ಟು ಕರುಣಿಸಲಿ

ಪಕ್ಕದಲ್ಲೇ ಮಲಗಿರುವ ನಿನ್ನ ಚಿಣಕಿ ಪಿಣಕಿ ಬೆರಳುಗಳು, ಮೆತ್ತನೆಯ ಗಂಧದ ಬಣ್ಣದ ನಿನ್ನ ಮೈ ಕೈ, ಹಲ್ಲುಜ್ಜಲೂ ಬಿಡದೆ ಹಳದಿಗಟ್ಟಿಸಿಕೊಂಡಿರುವ ಹಲ್ಲು, ಎಷ್ಟೇ ಆಡಿ ಕುಣಿದರೂ ದಣಿಯದ ಆ ಪುಟ್ಟ ಕಾಲ್ಗಳು, ಕೆನ್ನೆ ಮೇಲೆ ಇನ್ನೂ ಆರದೆ ಉಳಿದಿರುವ ಎರಡು ಬಿಂದು ಕಣ್ಣೀರು, ಕೆಂದುಟಿಗಂಟಿರುವ ಹನಿ-ಹನಿ ಹಾಲು.... ಮಲಗೆನೆಂದು ಅತ್ತೂ ಅತ್ತೂ ಬಳಲಿ ಮಲಗಿದೆಯಲ್ಲ ಕಂದ!! ನಿನ್ನ ತುಂಟತನ ಸಹಿಸಲಾಗದೆ ನಾ ನಿನಗೆ ಬೈದಾಗಲೆಲ್ಲ ಏನೂ ಅರಿಯದವನಂತೆ ಮಿಕ ಮಿಕ ಕಣ್ಣಗಲಿಸಿ ಬೆದರಿದ ಹರಿಣಿಯಂತೆ ನನ್ನುಸಿರ ಬಿಸಿಗೆ ಬೆಚ್ಚಗಾಗೋಣವೆಂದು ಓಡಿ ಬಂದು ನನ್ನ ತಬ್ಬುವೆಯಲ್ಲ ಕಂದ,, ನಿನ್ನದು ಅದೆಂತಹ ಪ್ರೀತಿ! ಅಮ್ಮನ ಮಡಿಲೇ ಹಾಗೆ ಎಲ್ಲಿಯೂ ಸಿಗದ ಶಾಂತಿ, ನೆಮ್ಮದಿ, ಸುರಕ್ಷಿತತೆಯ ಭಾವ.. ಎಲ್ಲವನ್ನೂ ನೀಡುತ್ತದೆ.

ನಿನ್ನಂತೆಯೇ ನಾನೂ ಇದ್ದೆನಂತೆ ಪುಟ್ಟ ಕೈ, ಕಾಲು, ಬಾಯಿ..ಎಲ್ಲಾ. ನನ್ನ ಆಯಿಯ ಸೆರಗಂಚು ಹಿಡಿದು ಭಯ ಅಂತ ನಿನ್ನೆ ಮೊನ್ನೆವರೆಗೂ ಓಡಾಡಿಕೊಂಡಿದ್ದೆ. ಇಂದು ಹೆದರದಿರೆಂದು ನಿನ್ನನ್ನು ನನ್ನ ತೆಕ್ಕೆಯಲ್ಲಿ ಭದ್ರವಾಗಿರಿಸಿಕೊಂಡು ಓಲೈಸುವಷ್ಟಾಗಿಬಿಟ್ಟಿದ್ದೇನೆ,, ನೆನ್ನೆವರೆಗೂ ಎಲ್ಲಿತ್ತೋ ಈ ತಾಯ್ತನ! ನನ್ನ ಆಯಿಯ ಕಣ್ಣಿಗೆ ನಾನು ಅಶಿಸ್ತೆಂದು ಕಂಡಾಗೆಲ್ಲ "ನೀನೂ ಒಂದು ಹೆಣ್ಣಾ" ಅಂತ ಬೈದಾಗ ನಕ್ಕು ಮೈ ಕೊಡವಿ ಬರುತ್ತಿದ್ದೆ. ಈಗ ಯಾರಾದರೂ "ನೀನೂ ಒಂದು ತಾಯೀನಾ" ಎಂದುಬಿಟ್ಟಾರೆಂದು ನಿನ್ನಾರೈಕೆಯಲ್ಲಿ ಅಚ್ಚುಕಟ್ಟಾಗಿಬಿಟ್ಟಿದ್ದೇನೆ..

ಪೋರಾ,, ಹೀಗೆ ದಿನ ಕಳೆವುದು.., ಅರಿವಿಲ್ಲದೊಂದು ದಿನ ನಿನಗೆ ಕುಡಿ ಮೀಸೆಯೂ ಚಿಗುರುವುದು. ಒಡೆದ ದನಿಯಲ್ಲಿ ಅಮ್ಮಾ ಎಂದು ಕರೆದಾಗ ಕಂದಾ ಎಂದು ಕೆನ್ನೆಗೆ ಮುದ್ದಿಸಲೇ ಎಂಬ ಸಂದಿಗ್ಧತೆ ನನಗೂ ಬರಬಹುದು. ಅದಾಗಲೇ ನೀನು ತನ್ನ ಖಾಸಗಿ ಎಂಬ ಗೋಡೆಯ ಹಿಂದಿನಿಂದ ಇರಮ್ಮಾ ಎಂದು ನಾ ಕರೆದರೂ ನೀ ಬಾರದೆಯೂ ಇರಬಹುದು..

ನೀನು ಈಗ ಒಲ್ಲೆ, ಆಗ ಒಲ್ಲೆ ಎಂದು ರಾಗವೆಳೆದರೂ ನಿನ್ನೊಲವಿಗೊಪ್ಪುವ ಕನ್ಯೆ ನನ್ನ ಸೊಸೆಯಾಗಿ ಬಂದಾಗಲೇ ಈ ಜೀವಕ್ಕೆ ತಂಪು. ಮಗ ಸೊಸೆ ಗುಸು-ಗುಸು ಮಾತಾಡಿಕೊಂಡು ನಕ್ಕಾಗ, ಮನೆ ತುಂಬಿದವಳ ಬಳೆ ಕೋಣೆಯೊಳಗೆ ವಿನಾಕಾರಣ ಘಲ್ ಘಲ್ ಎಂದಾಗ ನನಗೆಷ್ಟು ನೆಮ್ಮದಿಯಾಗುತ್ತೆ ಗೊತ್ತಾ ಕಂದಾ?? ನಾನೂ ಈ ಮನೆಗೆ ಒಂದು ಕಾಲದಲ್ಲಿ ಹೊಸಬಳಾಗಿಯೇ ಬಂದಿದ್ದೆನೆಂಬ ನೆನಪೆಲ್ಲ ನನಗೆ ಬಾರದೆ ಇರದು. ಮಗೂ,, ನಿನ್ನಜ್ಜ ಅಜ್ಜಿಯಂದಿರು ವಾಡಿಕೆಯಂತೆ ನಿನ್ನ ಸೊಸೆಗೆ ಎಂತಹ ಪ್ಲಾನಿಂಗೂ ಬೇಡಾ ಎಂದು ಹೆಳುವಂತೆ ನನ್ನ ಒತ್ತಾಯಿಸುವುದಂತೂ ಖಂಡಿತ.

ನಿನ್ನ ಎಲ್ಲಾ ತುಂಟತನದ ಫೋಟೊ, ಆಟಿಕೆ, ನೀನು ಮೊತ್ತ ಮೊದಲು ತೊಟ್ಟ ಬಟ್ಟೆ, ನಿನ್ನ ದೇವರ ಕೂದಲು ಉದುರಿದಾಗ ಎತ್ತಿಟ್ಟ ಆ ಸಿಕ್ಕು ಸಿಕ್ಕಿನ ಕೂದಲ ಗಂಟು, ನಿನ್ನ ತುಂಟಾಟಕ್ಕೆ ಸೋತು ಉದುರಿದ ಕಾಲ್ಗೆಜ್ಜೆಯ ಗೆಜ್ಜೆ ಗುಂಡು.. ಎಲ್ಲವನ್ನೂ ನಾನು ಭದ್ರವಾಗಿ ಎತ್ತಿಟ್ಟು ಜೋಪಾನ ಮಾಡುತ್ತಿದ್ದೇನೆ.., ನನ್ನ ಮೊಮ್ಮಕ್ಕಳಿಗೆ ಇದನ್ನೆಲ್ಲ ತೋರಿಸಿ ಕತೆ ಹೇಳಲಿಕ್ಕಾಗಿ.

ಮದುವೆಯಾದ ಮೇಲೆ ನನ್ನ ವಯಸ್ಸಿನವರೂ ನನ್ನನ್ನು ಆಂಟಿ ಎಂದಾಗ ನನಗಾದ ಮುಜುಗರ ಅಷ್ಟಿಷ್ಟಲ್ಲ, ಆದರೆ ಈಗ ಅಜ್ಜಿ ಎನಿಸಿಕೊಳ್ಳಲು ಆಗುತ್ತಿರುವ ತವಕ ಮಾತ್ರ ಹೇಳತೀರದು..

ನಿನ್ನ ಸಂಸಾರದ ವಾಸ್ತವದ ಜವಾಬ್ದಾರಿ ಶುರು ಆಗೋದು ನೀನು ಅಪ್ಪ ಎನ್ನಿಸಿಕೊಂಡಾಗಿನಿಂದ. ಮಕ್ಕಳನ್ನ ಹೆರ್ತೀಯೋ ಮಸಣಕ್ಕೆ ಹೋಗ್ತೀಯೋ ಅಂತ ನಮ್ಮನೆಗೆ ಬರುತ್ತಿದ್ದ ಕೆಲಸದ ಶಿವಮ್ಮ ಹೇಳ್ತಾ ಇರ್ತಿದ್ಲು. ಆದ್ರೆ ಪಶುವಂತೆ ಶಿಶುತನವ ಕಳೆದನಾ ಕೃಷ್ಣ ಎಂಬ ಮಾತೂ ನೆನಪಲ್ಲಿಡು. ತಲೆ ನೋವೆಂದು ಹೇಳಲಾಗದೆ ಹೊಟ್ಟೆ ನೋವಿಗೆ ಮದ್ದು ಕುಡಿವ ಮುದ್ದು ಕಂದಮ್ಮನ ಮೇಲೆ ಎಂದಿಗೂ ಅಕ್ಕರೆಯಿರಲಿ.

ನನ್ನ ದೊರೆಯೇ,, ಮೊಮ್ಮಕ್ಕಳಾಟದಲ್ಲಿ ನನ್ನ ಚರ್ಮ ಸುಕ್ಕಿದ್ದು ಮರೆಯುವುದೋ ಎನೋ?! ಹಲ್ಲುಗಳುದುರಿ ನಾನು ಅಕರಾಳ-ವಿಕರಾಳವಾಗಬಹುದು. ನೀನು ಬಳಿ ನಿಂತು ಅಮ್ಮ ಎಂದು ಕರೆದಿದ್ದೂ ಕೇಳಿಸದಷ್ಟು ಕಿವಿ ದೂರಾಗಿ ಚಾಳೀಸಿನ ನಂಬರ್ ಎರುತ್ತಾ ಹೋಗುತ್ತದೆಯಲ್ಲವೇ ನನಗೆ..? ಪಕ್ಕದ ಕೇರಿಯ ಮಾಯಬ್ಬೆಗೆ ಅರುಳು ಮರುಳಂತೆ ಎರಡು ತಿಂಗಳಿನಿಂದ. ಈ ಲೋಕದ ಖಬರ್ರೇ ಇರೊಲ್ವಂತೆ. ಮಿಮ್ಮಕ್ಕಳ ಬರುವು ಹಾಯುವ ವಯಸ್ಸಲ್ಲಿ ತನ್ನ ಮಗನಿನಿಗೇಂತ ತೊಟ್ಟಿಲು ಕಟ್ಟಿ ಜೋಗುಳ ಹಾಡ್ತಾಳಂತೆ. ಬರುವ ಜಾತ್ರೆಗೆ ಹೊಸ ಲಂಗ ತಗೋಬೇಕಂತ ದುಡ್ಡೂ ಜಮಾ ಮಾಡ್ತಿದಾಳಂತೆ..!! ಯಾರ್ಯಾರ ಕಾಲ ಹೇಗೋ ತಿಳಿಯದು. ಸುಖದ ಮರಣವನ್ನೂ ಕೇಳಿ ಬಂದಿರ ಬೇಕು. ನನ್ನ ಕತ್ತಿನಲ್ಲಿ ತಾಳಿ ತೂಗಿದಾಗಿಂದ ತುಪ್ಪದ ದೀಪ ಹಚ್ಚಿ ಮುತ್ತೈದೆಯಾಗಿ ಸಾಯುವ ಭಾಗ್ಯ ನನ್ನದಾಗಲಿ ಎಂದು ಬೇಡಿದ್ದು ಸಾರ್ಥಕವಾಗಲಿ ಎಂದು ನೀನೂ ಪ್ರಾರ್ಥಿಸು ಕಂದಾ. ಹೆತ್ತವರು ವಯಸ್ಸಾಗಿ ಎಷ್ಟೇ ನಮೆಯುತ್ತಿದ್ದರೂ ಮಕ್ಕಳಿಗೆ ಹೆತ್ತವರ ಸಾವನ್ನು ಪ್ರಾರ್ಥಿಸುವುದು ಸುಲಭವಲ್ಲ ಅಲ್ಲವಾ?? ನಾನಿಲ್ಲವಾದಾಗ ನನಗಿಂತ ಅತಿಯಾಗಿ ನಿನ್ನನ್ನು ಪ್ರೀತಿಸಿದ ನಿನ್ನ ತಂದೆಗೆ ಎಂತಹ ನೋವು ಆಗದಂತೆ ಕಾಪಾಡಿಕೊಂಡರೆ ನನಗದೇ ಭಾಗ್ಯ.

ಮುಪ್ಪು ಮನುಷ್ಯರ ಶತ್ರು ಕಣೋ,, ಬರೀ ರೋಗದ ಭೀತಿ, ನಿರ್ಲಕ್ಷ್ಯಕ್ಕೊಳಗಾಗಬಹುದೆಂಬ ಆತಂಕದ ಗೂಡು ಅದು. ಅವಲಂಬಿಸಿ ಬದುಕಲೂ ಕಷ್ಟವಾಗುವ ಅತ್ತ ಸಾಯಲೂ ಆಗದ ಸ್ಥಿತಿ. ಎಂತಹ ರೋಗವೂ ಬಾಧಿಸದೆ ನಿನ್ನ ಹೆತ್ತರಿಗೆ ಸುಖದ ಸಾವು ಬರಲೆಂದುಕೋ ಮಗನೇ.. ನಮಗೆ ಜಾಡ್ಯವಂಟಿದರೆ ನಿನಗೆಷ್ಟು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ತೊಂದರೆಯಾಗಬಹುದೇನೋ ಎಂಬ ಆತಂಕ ನನಗೆ. ಆ ಕಾಲಕ್ಕೆ ದಯಾ ಮರಣವೆನ್ನುವುದು ನಮ್ಮ ದೇಶದಲ್ಲೂ ಜಾರಿಗೆ ಬಂದಿದ್ದರೆ ಒಂದು ರೀತಿಯಲ್ಲಿ ಮುಪ್ಪಿನಲ್ಲೂ ದಿನ ದೂಡಲು ಧೈರ್ಯ ಮತ್ತು ನೆಮ್ಮದಿ ಇರುತ್ತಿತ್ತು.

ಎಷ್ಟೋ ಜನ್ಮದ ಋಣಾನುಬಂಧದಿಂದ ನಾವು ಹೀಗೆ ಸಂಬಂಧ ಹೊಂದಿ ಸಂಧಿಸುತ್ತೇವಂತೆ.., ನನ್ನ ನಲ್ಮೆಯ ಗಂಡನಿಗೆ ಹೆಂಡತಿಯಾಗಿ, ನಿನ್ನಂತಹ ಅಕ್ಕರೆಯ ಕಂದನಿಗೆ ಬರುವ ಜನ್ಮದಲ್ಲಿಯೂ ಅಮ್ಮನಾಗುವ ಆಸೆ ಕಣೋ. ನನ್ನ ತಾಳ್ಮೆ ಮೀರಿದಾಗ ನಿನ್ನ ತಪ್ಪಿಲ್ಲದೆಯೂ ನೀನು ನನ್ನಿಂದ ಶಿಕ್ಷೆಗೊಳಗಾಗಿರಬಹುದು,,, ನನ್ನಂತಹ ಅಮ್ಮಂದಿರ ಸಹವಾಸ ಸಾಕು ಎಂದು ನಿನಗೆ ಯಾವತ್ತಾದರೂ ಎನ್ನಿಸಬಹುದು.. ಆದರೆ ಮಗೂ ಯಾವದನ್ನೂ ಮನಸ್ಸಿಗೆ ತಗೊಳ್ಳದೆ ನನ್ನ ಮುಂದಿನ ಜನ್ಮದಲ್ಲೂ ನೀ ನನಗೆ ಮಗನಾಗಿ ಬರುವೆ ಎಂದು ಸುಳ್ಳಾದರೂ ಒಮ್ಮೆ ಆಶ್ವಾಸನೆ ಕೊಟ್ಟುಬಿಡೋ. ಸಾಯುವ ಈ ಜೀವಕ್ಕೆ ಸಾವೂ ಒಂದು ಆಶಾ ಕಿರಣದಂತೆ ಕಾಣಬಹುದು....

ಇಂತಿ ನಿನ್ನ
ಅಮ್ಮ.Friday, March 5, 2010

ಇನಿಯನಿಗೆರಡು ಕವನಗಳು೧.ನನ್ನಿನಿಯ

ರಂಗೋಲಿಯಂತೆ ನಕ್ಕುಬಿಡುತ್ತಾನೆ
ನಾನು ಕೇಳಿದಾಗೆಲ್ಲ
ಪ್ರೀತಿಸುವೆಯಾ ನನ್ನ?
ಬೆರಳ ಸಂದಿಯಲ್ಲಿ ನುಸುಳಿ
ಕದಡಿ ಹೋಗುತ್ತಾನೆ
ಹಿಡಿದಂತೆ ಬೊಗಸೆಯಲ್ಲಿ ನೀರನ್ನ...

ಹುಟ್ಟಿಲ್ಲದ ಹರಿಗೋಲಲ್ಲಿ ಪರದಾಡುವಂತೆ
ಮಿಡಿಕಾಡಿದರೆ
ತಡವುತ್ತಾನೆ
ಕರಗದಿರು ಎಂದು
ಕನಸಿಲ್ಲದ ಕಂಗಳಲ್ಲಿ
ಏನೇನೋ ಗೀಚಿ
ಚಿತ್ತಾರ ನೋಡೆಂದು
ಕಣ್ಣ ಕನ್ನಡಿ ಮಿಟುಕಿಸುತ್ತಾನೆ...

ಬರಿದೆ ಹಲುಬುತ್ತಿಲ್ಲ ಹಂಬಲಿಸಿ
ಅವನ ಸನಿಹವನು,
ಸನಿಹದಲ್ಲೇ ಇದ್ದು, ಎಡತಾಕಿದಂತಾಗಿ
ಸರಿದು ಹೋಗುತ್ತಾನೆ..,
ಎಲ್ಲಿಯೊ ಒಮ್ಮೊಮ್ಮೆ, ಆಗಾಗ
ಬಳಿಬಂದು
ಕೇಳದಂತೆ ಒಂದಿಷ್ಟು ಉಸುರಿ
ಭೇದಿಸಿದಷ್ಟೂ ಪ್ರಚ್ಛನ್ನನಾಗಿ
ಕಾವ್ಯವಾಗುತ್ತಾನೆ....
೨.ಇನ್ನು ಒಲಿಯಬಾರದೆ ????

ಸೋತಿತೆನ್ನೆದೆ ನಂಬು ನನ್ನನು
ಕೆದಕಿ ನನ್ನನು ಮೌನ ತಾನು,
ನೀನೆ ಹೇಳು
ಯಾತಕೀ ಬರಿ ಶೋಧನೆ?
ಹುಸಿ ಮುನಿಸು ನೀಡುವ ನೋವಿರದ ಯಾತನೆ
ಸಾಕು ನಿಲ್ಲಿಸು ಸುಮ್ಮನೆ.

ನನ್ನ ಕನಸಿನ ಹೂರಣ
ನೀ
ನನ್ನ ಬದುಕಿಗೆ ತೋರಣ
ಬಾಚಿ ತಬ್ಬಲು,
ಬಳಸಿ ನಿಲ್ಲಲು ಇರಲು ತೆರೆದೆದೆ
ಲತೆಯು ನಾನೆನಲಾರೆನೆ ???

ನಿನ್ನ ಹಗಲಿಗೆ ನೆರಳು ನಾನು
ಇರುಳು ಹಬ್ಬಲು
ನಿನ್ನ ತೊರೆವೆನೆ?
ಬೆಳಕೇ ಇರದ ಕಡು ಮಬ್ಬಲೂ
ಬೇರ್ಪಡಿಸದಂತೆ ನಾ
ನಿನ್ನ ಬೆರೆಯೆನೇ ???

ಮಾಡಲಾರೆನು ಆಣೆ ಭಾಷೆ
ಬಣ್ಣ ಬದಲಿಸುವುದನರಿಯೆನು,,
ಕಲೆತು ನಿನ್ನಲಿ,
ನಡೆದು ಬಂದಿಹೆ
ನಿನ್ನ ಕೋಪಕೆ, ವಿರಹ ತಾಪಕೆ
ಕರಗಲಾರದೆ ಹೋಪೆನೇ ???

ನಿನ್ನ ಭಾವಕೊಂದು ಚಿಲುಮೆ
ಬತ್ತದಂತೆ ಇರಲು ಒಲುಮೆ
ಇರುವೆ ನಿನ್ನಲಿ
ನೀನೆ ಆಗಿ

ನಾನು ಛಾಯೆ
ನಾನು ಛಾಯೆ

ತೋರಿಸೆನ್ನನು ನಿಶೆಯಲಿ
ಸೋತರೆ ನಾ
ನಿನಗೆ ಒಲಿವೆನು
ಗೆದ್ದರೆ
ನಾ ನಿನಗೆ ಶರಣು..
ಇನ್ನು ಒಲಿಯಬಾರದೆ,,
ಒಲವು ನನ್ನಲಿ ಬಾರದೆ ???????


Monday, March 1, 2010

ಕುಮಟೆಯ ಹನಿಗಳು

ಕುಮಟೆಯ ಕವನಗಳು..

-೧-
ಕರಿಕಾಳ ಅಮ್ಮನವರಿಗೆ
ಹರಕೆ ಹೊತ್ತ
ಆ ಹುಡುಗಿಯ
ಮನಸ್ಸಲ್ಲೇನಿದ್ದೀತು,,,
ತನಗೊಂದು ಒಳ್ಳೇ ವರ,
ಅಣ್ಣನಿಗೊಂದು ದಕ್ಕದ ಕೆಲಸ,
ತಮ್ಮನಿಗೆ ಮೆಡಿಕಲ್ಲು ಸೀಟು,
ಅಮ್ಮನ ಆಪರೇಷನ್ನಿಗೊಂದಿಷ್ಟು ದುಡ್ಡು
ಅಥವಾ
ನಮೆಯುತ್ತಾ ನರಳುತ್ತಿರುವ ಅಪ್ಪನಿಗೆ
ಮುಕ್ತಿ...

-೨-
ಮಾರಲಿಕ್ಕಿಟ್ಟ
ಬಂಗ್ಡೆ, ತಾರ್ಲಿ, ಫೇಡೆ, ಪಾಂಪ್ಲೀಟುಗಳ
ಸಾಲಲ್ಲಿ ಕುಂತ
ಒಬ್ಬ ಹರಿಕಾಂತರ ಪೋರ...

-೩-
ಅಘನಾಶಿನಿ, ಮಾಸೂರು
ಬೊಗರಿಬೈಲು, ಮುರೂರು
ಹೆಗಡೆ, ಕೂಜಳ್ಳಿ
ಬಸ್ಸುಗಳನ್ನೆಲ್ಲಾ
ಹತ್ತಿಳಿದು
ಒಂದು ಅಯ್ಸ್ ಕ್ಯಾಂಡಿಯಾದರೂ
ವ್ಯಾಪಾರವಾಗಿ
ಕಾಸು ಸಿಗಲಿ
ಎಂದು ಕಾತರಿಸುವ
ಬೊಕ್ಕೆಯೆದ್ದ ಪಾದದ
ಬರಿಗಾಲ
ಕರಿ ಹುಡುಗ...

-೪-
ಕುಟ ಕುಟಿ ಲೂನಾ ಏರಿ
ಪ್ರತಿದಿನ
ಕುಮಟೆಗೆ ಬರುವ
ಅಜ್ಜನ ಕೈ ಚೀಲದಲ್ಲಿದ್ದಿದ್ದು
ಮೊಮ್ಮಕ್ಕಳಿಗೆಂದು ಕೊಂಡ
ಲಿಂಬೆ ಹುಳಿ ಪೆಪ್ಪರಮಿಂಟು
ಮತ್ತು
ಕರಗುತ್ತಿರುವ
ಕುಮಟೆ ಸ್ಪೇಷಲ್ ಗಡಬಡ್...

-೫-
ಕಡಲ ಒಡನಾಟದಿಂದ ದೂರವಿದ್ದೂ
ಕಡಲ ಕುಮಟೆಯನ್ನೇ
ಕನಸಿಸುವ
ಕುಮಟೆಯ ಕೂಸು
ಈ ಸಾಗರಿ...