Friday, March 5, 2010

ಇನಿಯನಿಗೆರಡು ಕವನಗಳು







೧.ನನ್ನಿನಿಯ

ರಂಗೋಲಿಯಂತೆ ನಕ್ಕುಬಿಡುತ್ತಾನೆ
ನಾನು ಕೇಳಿದಾಗೆಲ್ಲ
ಪ್ರೀತಿಸುವೆಯಾ ನನ್ನ?
ಬೆರಳ ಸಂದಿಯಲ್ಲಿ ನುಸುಳಿ
ಕದಡಿ ಹೋಗುತ್ತಾನೆ
ಹಿಡಿದಂತೆ ಬೊಗಸೆಯಲ್ಲಿ ನೀರನ್ನ...

ಹುಟ್ಟಿಲ್ಲದ ಹರಿಗೋಲಲ್ಲಿ ಪರದಾಡುವಂತೆ
ಮಿಡಿಕಾಡಿದರೆ
ತಡವುತ್ತಾನೆ
ಕರಗದಿರು ಎಂದು
ಕನಸಿಲ್ಲದ ಕಂಗಳಲ್ಲಿ
ಏನೇನೋ ಗೀಚಿ
ಚಿತ್ತಾರ ನೋಡೆಂದು
ಕಣ್ಣ ಕನ್ನಡಿ ಮಿಟುಕಿಸುತ್ತಾನೆ...

ಬರಿದೆ ಹಲುಬುತ್ತಿಲ್ಲ ಹಂಬಲಿಸಿ
ಅವನ ಸನಿಹವನು,
ಸನಿಹದಲ್ಲೇ ಇದ್ದು, ಎಡತಾಕಿದಂತಾಗಿ
ಸರಿದು ಹೋಗುತ್ತಾನೆ..,
ಎಲ್ಲಿಯೊ ಒಮ್ಮೊಮ್ಮೆ, ಆಗಾಗ
ಬಳಿಬಂದು
ಕೇಳದಂತೆ ಒಂದಿಷ್ಟು ಉಸುರಿ
ಭೇದಿಸಿದಷ್ಟೂ ಪ್ರಚ್ಛನ್ನನಾಗಿ
ಕಾವ್ಯವಾಗುತ್ತಾನೆ....




೨.ಇನ್ನು ಒಲಿಯಬಾರದೆ ????

ಸೋತಿತೆನ್ನೆದೆ ನಂಬು ನನ್ನನು
ಕೆದಕಿ ನನ್ನನು ಮೌನ ತಾನು,
ನೀನೆ ಹೇಳು
ಯಾತಕೀ ಬರಿ ಶೋಧನೆ?
ಹುಸಿ ಮುನಿಸು ನೀಡುವ ನೋವಿರದ ಯಾತನೆ
ಸಾಕು ನಿಲ್ಲಿಸು ಸುಮ್ಮನೆ.

ನನ್ನ ಕನಸಿನ ಹೂರಣ
ನೀ
ನನ್ನ ಬದುಕಿಗೆ ತೋರಣ
ಬಾಚಿ ತಬ್ಬಲು,
ಬಳಸಿ ನಿಲ್ಲಲು ಇರಲು ತೆರೆದೆದೆ
ಲತೆಯು ನಾನೆನಲಾರೆನೆ ???

ನಿನ್ನ ಹಗಲಿಗೆ ನೆರಳು ನಾನು
ಇರುಳು ಹಬ್ಬಲು
ನಿನ್ನ ತೊರೆವೆನೆ?
ಬೆಳಕೇ ಇರದ ಕಡು ಮಬ್ಬಲೂ
ಬೇರ್ಪಡಿಸದಂತೆ ನಾ
ನಿನ್ನ ಬೆರೆಯೆನೇ ???

ಮಾಡಲಾರೆನು ಆಣೆ ಭಾಷೆ
ಬಣ್ಣ ಬದಲಿಸುವುದನರಿಯೆನು,,
ಕಲೆತು ನಿನ್ನಲಿ,
ನಡೆದು ಬಂದಿಹೆ
ನಿನ್ನ ಕೋಪಕೆ, ವಿರಹ ತಾಪಕೆ
ಕರಗಲಾರದೆ ಹೋಪೆನೇ ???

ನಿನ್ನ ಭಾವಕೊಂದು ಚಿಲುಮೆ
ಬತ್ತದಂತೆ ಇರಲು ಒಲುಮೆ
ಇರುವೆ ನಿನ್ನಲಿ
ನೀನೆ ಆಗಿ

ನಾನು ಛಾಯೆ
ನಾನು ಛಾಯೆ

ತೋರಿಸೆನ್ನನು ನಿಶೆಯಲಿ
ಸೋತರೆ ನಾ
ನಿನಗೆ ಒಲಿವೆನು
ಗೆದ್ದರೆ
ನಾ ನಿನಗೆ ಶರಣು..
ಇನ್ನು ಒಲಿಯಬಾರದೆ,,
ಒಲವು ನನ್ನಲಿ ಬಾರದೆ ???????


8 comments:

Raghavendra said...

ತುಂಬ ಚೆನ್ನಾಗಿ ಬರೆಯುತ್ತೀರಿ ಕವಿತೆಗಳನ್ನು...

ಸೀತಾರಾಮ. ಕೆ. / SITARAM.K said...

ಎರಡೂ ಕವನಗಳು ಸು೦ದರವಾಗಿವೆ ಮೊದಲನೆಯದು ಅಪ್ತವೆನಿಸಿತು. ಶಬ್ದಗಳ ಹೆಣೆತ ಮಧುರವಾಗಿದೆ.
ಬರೆಯುತ್ತಾ ಇರಿ.

sunaath said...

ಸಾಗರಿ,
comments settings ಸರಿಪಡಿಸಿದ್ದಕ್ಕೆ ಧನ್ಯವಾದಗಳು. ನೀವು ಬರೆದ ಕವನಗಳೆರಡೂ ಸುಂದರವಾಗಿವೆ. ಓದಿ ಖುಶಿಯಾಯಿತು.ನಿಮ್ಮ ಮುದ್ದು ಮಗನಿಂದಾಗಿ ನಿಮಗೆ ಸಮಯ ಹೊಂದಿಸಿಕೊಳ್ಳಲು ತೊಂದರೆಯಾಗುತ್ತಿರಬಹುದು. ಸಿಕ್ಕ ಸಮಯದಲ್ಲಿಯೇ ಇಂತಹ ಒಳ್ಳೆಯ ಕವನ ಕೊಟ್ಟಿದ್ದೀರಿ. ಅಭಿನಂದನೆಗಳು.
ಕುಮಟೆಯ ಕರಿಕಾಲಮ್ಮನಿಗೆ ಪ್ರಾರ್ಥಿಸಿದ್ದೀರಿ. So, ನೀವು ಕುಮಟೆಯ ಸಾಗರ ತೀರದ ಸಾಗರಿ ಅಂತಾಯ್ತು. ನಾನೂ ಕುಮಟೆಯಲ್ಲಿ ಒಂದು ವರ್ಷ PUC classನಲ್ಲಿ ಓದಿದ್ದೆ. ಹೀಗಾಗಿ ನಿಮಗೆ ನಾನು ಆಪ್ತನೇ ಆಗಬೇಕಾಯಿತು!

Subrahmanya said...

ಅಂತೂ ಕಾಮೆಂಟ್ ಸೆಟ್ಟಿಂಗ್ಸ್ ಸರಿಪಡಿಸಿದಿರಲ್ಲ. :), ಇದಕ್ಕೆ ನಿಮಗೂ ಮತ್ತು ಕಾಕ ಇಬ್ಬರಿಗೂ ಧನ್ಯವಾದ.
ಮತ್ತೆ ಎಲ್ಲಾ ಕವಿತೆಗಳನ್ನೂ ಒದಿದ್ದೆ, ತುಂಬಾ ಚೆನ್ನಾಗಿ ಬರೆಯುತ್ತೀರಿ. ..ಬರೆಯುತ್ತಿರಿ. :)

ಸಾಗರಿ.. said...

ರಾಘವೇಂದ್ರ ಅವರೇ
ಬ್ಲಾಗ್ ಡಿಸೈನ್ ಮಾಡಿದ್ದು ಬಹಳ ಮೊದಲೆ ಆದರೂ ನಾನು ಬ್ಲಾಗಲ್ಲಿ ನನ್ನ ಬರವಣಿಗೆ ಪ್ರಕಟಿಸಿದ್ದು 2010 ಜನವರಿಯಿಂದ. ನನ್ನ ಬ್ಲಾಗ್ ಲೈಫಿನ ಪ್ರಪ್ರಥಮ ಕಾಮೆಂಟು ನಿಮ್ಮದು. ಎಂದಿಗೂ ಹೀಗೆ ಪ್ರೋತ್ಸಾಹಿಸುತ್ತಿರಿ.

ಸಾಗರಿ.. said...

ಸೀತಾರಾಮ್ ಸರ್,
ಕಬ್ಬಿಗರ ಲೋಕದಲ್ಲಿ ನಾನಿನ್ನೂ ಸಣ್ಣ ಕೂಸು, ನನ್ನ ಕವನವನ್ನು ಓದಿ ಕಾಮೆಂಟಿಸಿದ್ದಕ್ಕೆ ನಾನು ನಿಮಗೆ ಆಭಾರಿ. ನಿಮ್ಮ ಆಶೀರ್ವಾದ ಎಂದಿಗೂ ನನ್ನೊಂದಿಗಿರಲಿ

ಸಾಗರಿ.. said...

ಕಾಕಾ,
ನಿಮ್ಮ ಮಾತು ನಿಜ ನಾನು ಕಡಲ ತಡಿಯ ಸಾಗರಿ(ತಡಿಯ ಒಂದು ಕಡೆ ಕಡಲು ಮತ್ತೊಂದು ಕಡೆ ಈ ಸಾಗರಿ). ನನ್ನ post graduation(MA economics) ಧಾರವಾಡ ವಿಶ್ವವಿದ್ಯಾಲಯದಲ್ಲೇ ಆದದ್ದು. ಆದ್ದರಿಂದ ನಾವು ಆಪ್ತರೇ ಸರಿ. ಕಾಮೆಂಟ್ ಬರ್ಯೋಕೆ ಅಗ್ತಾ ಇಲ್ಲ ಎಂದು ನೀವು ಹೇಳದಿದ್ದರೆ ಖಂಡಿತ ನಾನು setting mistake ಅನ್ನು ಲಕ್ಷ್ಯಕ್ಕೆ ತಗೊಳ್ಳುತ್ತಿರಲಿಲ್ಲ. ನಿಮ್ಮ ಪ್ರೋತ್ಸಾಹ, ತಪ್ಪು ಒಪ್ಪಿನ ತಿದ್ದುಪಡಿಯನ್ನು ನಿಮ್ಮಿಂದ ನಾನು ಎಂದಿಗೂ ನಿರೀಕ್ಷಿಸುವೆ. ನಿಮಗೆ ನಾನು ಆಭಾರಿ.

ಸಾಗರಿ.. said...

ಭಟ್ಟರೇ(ಅನುಮತಿಯಿಲ್ಲದೆ ಭಟ್ಟರೇ ಎಂದು ಸಂಭೋದಿಸಿದ್ದಕ್ಕೆ ಬೇಸರವೆನಿಸಿದರೆ ಕ್ಷಮೆ ಇರಲಿ.)
ಕವನಗಳನ್ನು ಪ್ರೀತಿಯಿಂದ ಓದಿದ ನಿಮಗೆ ತುಂಬಾ ಧನ್ಯವಾದಗಳು. ಹೀಗೇ ಪ್ರೋತ್ಸಾಹಿಸುತ್ತಿರಿ.