ಕಾಮ(ದ) ದಾಹ..
ಕಾಡಿನ ಸಂದು ಗೊಂದುಗಳಲ್ಲಿ
ಮಿಣ್ಣನವಿತು ಕುಳಿತ
ಕಾಮ
ಮೋಜೆನಿಸಿ
ಕಪ್ಪೆಯಂತೆ ಜಿಗಿದು
ಆಗಸಕ್ಕೇರಿ ಸ್ವರ್ಗ ಸೇರಿತು.
ಕಣ್ಣಿಟ್ಟಲ್ಲೆಲ್ಲಾ ಸಿಂಗಾರ ಬಂಗಾರ
ವರ್ಷವಿಡೀ ವಸಂತ, ಎಂದೂ
ಮಾಸದ ವಸಂತ
ಚೆಲ್ಲಾಡುವ ಹರೆಯ
ಢೊಲು, ಸಂಗೀತ, ಕುಣಿತ
ಸ್ವರ್ಗದವರೆಲ್ಲಾ ಮೀಯುವುದು
ಮದಿರೆಯಲ್ಲೇ ಎಂದು
ಎಂದೋ ಕೇಳಿದ್ದು
ಇಂದು ಕಂಡಂತಾಗಿತ್ತು..,
ಜೀವನ ಪರ್ಯಂತ
ಇಲ್ಲೇ ಇದ್ದು ಬಿಡಬೇಕೆಂದುಕೊಂಡ
ಮರುದಿನವೇ
ಕಾಮ
ಅಲ್ಲಿಯವರ ತೃಪ್ತ ಕಂಗಳ ಕಂಡು
ಕಂಗೆಟ್ಟು ಬರುಡಾಗಿ
ತನ್ನಿರುವಿಗಿಲ್ಯಾವ ಬೆಲೆಯಿಲ್ಲ
ಕಾಮ ಪ್ರೇಮದಲ್ಲಿವರು
ಸಂತುಷ್ಟರೆಂದರಿತು
ದಾರಿ ಕಾಣದಂತಾಗಿ
ಭೂಮಿಗುದುರಿತು..
ಕಂಡಿದ್ದೆನಿಲ್ಲಿ..
ಪ್ರತಿಯೊಬ್ಬರೂ
ದಾಹದಲ್ಲುರಿಯುತ್ತಿರುವ
ಒಂದೊಂದು ಚಿತೆಗಳು,,
ತೀರದ ಕಾಮ
-ದ ಕಡಲಲ್ಲಿ ಮುಳುಗಿದ
ಪ್ರತಿ ದೇಹವೂ ತಣಿಸಲಾರದ
ತುಡಿತದಿಂದ ತಪಿಸುತ್ತಿತ್ತು.
ಕಾಪುರುಷರ ಲೋಕದಲ್ಲಿ
ಕಾಮಕ್ಕೆಲ್ಲಿದೆ ಬಿಡುವು
ದಣಿದಷ್ಟೂ ಖುಶಿ ಕೊಡುವ
ಆಟವಲ್ಲವೇ ಇದು!!
ಹೊಟ್ಟೆಯ ಹಸಿವು, ಕಾಮ-ಮೋಹ
ಎಂದು ತೀರಿದ್ದಿದೆ,
ಪಡೆದಷ್ಟೂ ಬೇಕೆನಿಸಿ ಸುಖಿಸಿ
ಮತ್ತೆ ಹುಡುಕುವ ಚಪಲರ ದಂಡು ಕಂಡು
ಕಾಡು-ಮೇಡು, ಸ್ವರ್ಗದಲ್ಲೆಲ್ಲೂ ಇರದ
ದಾಹದ
ರೌರವವ ನೋಡಿ
ಹಿರಿಮೆಗೊಂಡು
ಕಾಮ,,,
"ಸ್ವರ್ಗಕ್ಕೆ
ಮತ್ತೊಮ್ಮೆ ಕಿಚ್ಚು ಹಚ್ಚೆಂದಿತು.."

