Wednesday, January 27, 2010

ನಮ್ಮ ಅಕ್ಕೋರು ಮಾಸ್ತರ್ರಿಗೆ...
(ಪ್ರೀತಿಯಿಂದ)

ಹದಿನೇಳ ಏಳಲೆಗೇ ನಿಂತ ಮಗ್ಗಿಯ ಗಾಡಿ,
ಮೆಲಕ್ಕೇರದ ಅಣ್ಣನು ಮಾಡಿದ ಗಾಳಿಪಟ,
ಮುಂದೆ ಸಾಗದ ನನ್ನ ನವಿಲು
ನಮ್ಮ ಮಾಸ್ತರ್ರರ ಬೆತ್ತದೇಟಿಗೂ ಬಗ್ಗದೆ
ಹರಿದ ಖಾಕಿ ಚದ್ದಿಯನ್ನಷ್ಟೆ
ಒದ್ದೆ ಮಾಡುತ್ತಿದ್ದರೂ
ಅವರ ಬಾಯಿಪಾಠದ ಕಾಟ ತಪ್ಪುತ್ತಿರಲಿಲ್ಲ.

ಪ್ರತಿ ವರ್ಷವೂ
ನಾ ಕಂಡ ಮಳೆಗಾಲ, ನಾನು ಮಂತ್ರಿ ಆದರೆ,
ಪ್ರವಾಸ ಕಥನ, ಹಿಡಿಯ ಆತ್ಮ ಚರಿತ್ರೆ
ನನ್ನ ಗುರಿ.. ಇಂತಹ ನಿಬಂಧಗಳನ್ನೆ ಬರೆದೂ ಬರೆದು
ನಾವು ದಂಗಾದರೂ ನಮ್ಮ ಶರಾ ಮಾತ್ರ
ಆರಕ್ಕೇರಲಿಲ್ಲ,,,,, ಮೂರಕ್ಕೂ ಏರಲಿಲ್ಲ,
ಅವರೂ ಹೆದರದೆ ಅಪ್ಪನನ್ನೇ ಕರೆಸಿ ಬಿಸಿ ಹಚ್ಚಿ
ಗೆದ್ದಂತೆ ನಗುತ್ತಿದ್ದರು.

ದಿನಚರಿ ಪುಸ್ತಕದಲ್ಲಷ್ಟೆ
ದಿನಾಲು ಕಸಗುಡಿಸುತ್ತೇವೆಂದು ಗೊತ್ತಿದ್ದರೂ
ಒಂದಿನವೂ ಬಿಡದೆ ದಿನಚರಿ ಓದಿ
ಸಹಿ ಹಾಕುವ ಅಕ್ಕೋರಿಗೂ ಗೊತ್ತಿತ್ತು
ಶುಚಿ ಎಂದರೆ ನಮಗೆ ಅಲರ್ಜಿ ಎಂದು.
ಹಾಗಂತ ಪ್ರರ್ಥನೆಯಾದ ಮೇಲೆ ಸತ್ಯವೇ ದೇವರು,
ತಾಯಿಗಿಂತ..; ಕೈ ಕೆಸರಾದರೆ..ಅಂತೆಲ್ಲಾ ಒದರಿಸಿ
ಸಿಂಗನ ಉಗುರು, ಹಳದಿ ಹಲ್ಲನ್ನು ನೋಡಿ
ಕಿವಿ ಹಿಂಡುವುದನ್ನೆಂದೂ ಮರೆಯುತ್ತಿರಲಿಲ್ಲ.

ಪರೀಕ್ಷೆಯ ಮಾರ್ಕ್ಸು ಬಂದಾಗಲೆಲ್ಲ
ನಮ್ಮದು ಒಂದೇ ಗೋಳು
ಅಕ್ಕೋರು ಮಾಸ್ತರ್ರು ಸರಿ ಪಾಠ ಮಾಡಲ್ಲ,,
ಹೀಗೆ ಆಗುತ್ತೆ ಅಂತ ನಮ್ಮ ಅಕ್ಕೋರು ಮಾಸ್ತರ್ರಿಗೂ ಗೊತ್ತು!!
ಕೋಣಗಳ ಮುಂದೆ ಕಿನ್ನರಿ ಊದಿ
ರೂಢಿ ಆದ ಕಿನ್ನರ ಜೊಗಿಯ ವಂಶಸ್ಥರಂತೆ
ಕಾಯಕದಲ್ಲಿ ಕೈಲಾಸ ಕಾಣುವ ಸಹನಾ ಜೀವಿಗಳು
ನಮ್ಮ ಅಕ್ಕೋರು ಮಾಸ್ತರ್ರು

ಗೊಂಡೆಯೋ, ಗುಲಾಬಿ, ದಾಸಾಳವೋ
ತಂದ ಹೂವೆಲ್ಲ ಪ್ರೀತಿಯಿಂದ
ಅಕ್ಕೋರ ಮುಡಿಗೆ
ಬೆಟ್ಟದ ನೆಲ್ಲಿಕಾಯೆಲ್ಲ
ನಮ್ಮೊಲುಮೆಯ ಮಾಸ್ತರ್ರರ ಪಾಲಿಗೆ.

ಅಕ್ಕೋರು ಮಾಸ್ತರ್ರರ ಮೇಲಿನ ಭಯ, ಭಕ್ತಿ, ಪ್ರೀತಿ
ಮತ್ಯಾವ ಸರ್, ಮೇಡಮ್
ಯಾವ ಲೆಕ್ಚರ್ರರ ಮೇಲೂ(ಲೆಕ್ಚರಿಕೆಯ ಮೇಲೂ)
ಬಂದಿಲ್ಲ.
ಜೀವನದಲ್ಲೊಮ್ಮೆ ಕಾಣುವ ಸರ್ವಜ್ಞರೇ
ನಮ್ಮ ಅಕ್ಕೋರು ಮಾಸ್ತರ್ರು ಎಂದರೂ ತಪ್ಪಿಲ್ಲ
(ಏಕೆಂದರೆ ಕಡೆಗೆಲ್ಲಾ ನಮ್ಮನ್ನುಳಿದು ನಮಗೆ ಇನ್ಯಾರೂ ಸರ್ವಜ್ಞರಂತೆ ಕಾಣಲ್ಲ)

Tuesday, January 26, 2010


ಹನಿಗವನಗಳು
(ಕಸ್ತೂರಿಯಲ್ಲಿ ಪ್ರಕಟಗೊಂಡಿದ್ದು)1.ಮೌನಿ
ನಗು ಬಂದಾಗ ನಗದೆ
ಕಷ್ಟದಲ್ಲೂ ಅಳದೆ
ಬೇಸತ್ತ ಬದುಕಿಗೆ
ಬೆನ್ನೂ ಕೊಡದೆ
ಒಡಲಾಳದಲ್ಲೇ ಅಳಲು
ಬಚ್ಚಿಟ್ಟು
ತುಟಿಗೆ ತುಟಿ ಆನಿಸಿ
ಒರಗಿದ ಈತ
ಮೂಕನಲ್ಲ
ಮೌನಿ


2.ಅಂತರಂಗದ ಮಾತು
ನನ್ನೆದೆಯ ಶೈತ್ಯಾಗಾರದಲ್ಲಿ
ನೂರಾರು ಕನಸುಗಳಿವೆ
ಕೆಲವು ಸತ್ತಿವೆ
ಹಲವು ಕೊಳೆತಿವೆ
ಆದ್ದರಿಂದಲೇ ವಾಸನೆ
ಬಾಯ್ತೆರೆದರೆ

Wednesday, January 20, 2010

ಕ್ಷಣ ಗಣನೆ..

ಕ್ಷಣ ಗಣನೆ..

ಬೀಳುವ ನಕ್ಷತ್ರ ಕಂಡಾಗ
ಮನದ ಬಯಕೆಗಳ
ಕದ
ತೆರೆದು,
ಕಣ ಕಣವೂ ನಿನಗಾಗಿ ಮಿಡಿದ
ಕನಸುಗಳನ್ನೆಲ್ಲಾ ಸುರಿದು
ಮಾಲೆಯಂತೆ ಹೆಣೆದು
ಶಬರಿಯಂತೆ ಕಾಯುತ್ತಿದ್ದೇನೆ
ಅಂದುಕೊಂಡಿದ್ದೆಲ್ಲಾ
ಅಂತೆಯೇ ಆಗುವುದೇ ಎಂದು!!

ಎದೆಯೊಳಗಿನ ಆಸೆಗಳನು
ಉದುರಿದ ಕಣ್ರೆಪ್ಪೆಯಲಿ ಕೂಡಿಟ್ಟು
ಊದಿ
ಹಾರಿದರಷ್ಟೇ ಆಸೆ ಈಡೇರುವುದಂತೆ
ಎಂದಾಗ
ಕಸುವೆಲ್ಲಾ ಉಸಿರಾಗಿ ರೆಪ್ಪೆಯನು
ಸುಳಿಗಾಳಿಯಲಿ ತೂರಿ
ಹಗುರಾಗಿದ್ದೇನೆ
ನನಗಾಗಿಯೇ ನಾಳೆ
ಊಹೂಂ..
ನನಗೆಂದೇ ನಾಳೆ ಎಂದು.

ಯರೋ ಕುಣಿಸಿದಂತೆ ಕುಣಿವ ಕಾಲು
ಓಡುತ್ತಿರುವ ಕಾಲ
ನಿಲ್ಲದ ಇದೊಂದೂ ನನದಲ್ಲ,
ನೀನಿರುವ ಈ ನಾನೂ
ನಾನಲ್ಲ..
ಆದರೂ,,,
ನಿರೀಕ್ಷೆಯಲಿ
ದಿನ ದಿನವೂ ನಲುಗುತ್ತ
ನೆನೆ ನೆನೆದು ನೋಯುತ್ತ
ಹೊಸೆದಿಟ್ಟ ನೆಣೆಯಂತೆ
ಕತ್ತುತ್ತಾ ಕರಗುತ್ತಲಿದ್ದರೂ
ಹೇಗೆ ಕಿತ್ತೆಸೆಯಲಿ ನನ್ನೊಳಗಿನ ನಿನ್ನನ್ನು?
ಶಪಿತ ಅಹಲ್ಯೆಯೂ ಕಲ್ಲಾಗಿ ಕಾದಳಲ್ಲವೇ
ತನ್ನ ಬದುಕನ್ನು???

ನಿನ್ನ ದನಿಗೆ
ನಾ
ಪ್ರತಿಧ್ವನಿಯಾಗಿ
ತನುವೆಲ್ಲಾ ಅನುರಣಿಸಿ
ರೋಮಕೂಪವೇ ಕೆಂಡದಂತುರಿವ
ಕುಂಡವಾಗಿ
ಕೊನೆಯುಸಿರಲ್ಲಿ ಬಂಧಿಯಾದ
ನಾನು
ಕಾದೂ ಕಾದು
ಖಾಲಿಯಾಗುತ್ತಿದ್ದೇನೆ...

Thursday, January 7, 2010

ಅಹನ್.ಎಲ್ಲಿಯೋ ಬೆಳೆದ ಎರಡು ಜೀವಗಳು ಗರಿಗೆದರಿ ಒಂದಾಗಿ, ಒಲವಿನಲೆಯಲ್ಲಿ ಮಿಂದು, ಪ್ರತಿ ಕ್ಷಣವೂ ಹೊಸ ಪುಟವಾಗಿ ತೆರೆದು, ತೆರೆ ಮರೆಯ ಮುಖಗಳು ಒಂದೊಂದಾಗಿ ಪರಿಚಿತವಾಗಿ, ಅದು ನಗುವಾಗಿ, ಮುನಿಸಾಗಿ, ನಲ್ಮೆಯ ಕನಸಾಗಿ ದಾಂಪತ್ಯದ ನೆಲದಲ್ಲಿ ಹಬ್ಬಿ ಹರಡಿದ ಬಳ್ಳಿಗೆ ಒಂದು ಹೂವಷ್ಟೇ ಕಡಿಮೆ ಎನ್ನಿಸಿತು.ಜಗತ್ತಿನಲ್ಲಿರುವ ಸಿಹಿಯೆಲ್ಲ ಒಂದಾಗಿ, ನಗುವಲ್ಲಿ ಹೊರಳಾಡಿ, ಅಮ್ರತವನುಂಡು ಕಡೆಗೆ ನಮಗಾಗಿ, ಬದುಕಾಗಿ ಬಂದವನೇ ಅಹನ್.

ಅಹನ್ ಎಂದರೆ ಸೂರ್ಯ(ಅಹನಿ ಎಂದರೆ ಹಗಲು), ನಾಶವಿಲ್ಲದವನು ಎಂದು
ಇವನೇ ನಮ್ಮ ಕಂದ ನೀಲಿ ಕಂಗಳ ಅಹನ್


ಸ್ನಾನ ಮಾಡಿಸಿ ಜೊಗುಳ ಹಾಡಿದ್ರೂ ಮಲ್ಗಲ್ಲ ಅಂತ ನಗ್ತಾನೆ..


ಅಹನ್ ಪಿಯಾನೊ ನುಡಿಸಿದ್ದು ೫ನೇ ತಿಂಗಳಲ್ಲಿ


ನನಗೂ ಹೊಸತು, ಅಹನ್ ಗಂತೂ ಎಲ್ಲವೂ ಹೊಸತು, ಇಬ್ಬರೂ ಕಲಿಯತೊಡಗಿದೆವು ಜೊತೆಯಾಗಿ. ನಾನು ಅವನ ಗುರು,
ಅವ ನನ್ನ ಗುರು.
ಅಡಿಗೆ ಮಾಡೋಕೂ ತುಂಬಾನೇ ಹೆಲ್ಪ್ ಮಾಡ್ತಾನೆ ಅಹನ್


ಸ್ನಾನ ಆದ್ಮೇಲೆ ದೇವರ ಪೂಜೆ ಮಾಡದೆ ಇರೋಕಾಗತ್ತ?

ಅಮ್ಮ ಬೈತಾಳೆ ಅಂತ ಸುಳಿವು ಸಿಕ್ಕಿದ್ರೆ ಸಾಕು, ಹೀಗೆ ಅವಿತುಕೊಳ್ತನೆ ತುಂಟಅಮ್ಮನಾದ ಮೇಲೆ ನನಗೆ ನನ್ನ ಆಯಿಯ(ಅಮ್ಮ) ಮೇಲಿನ ಪ್ರೀತಿ ಇನ್ನೂ ಹೆಚ್ಚಾಗಿದೆ, ಅಬ್ಬಬ್ಬ ನನ್ನ ಆಯಿಯೂ
ನನ್ನನ್ನು ಎಷ್ಟೆಲ್ಲಾ ಸಹಿಸಿದ್ದಳು.. ನಿದ್ರೆ ಇಲ್ಲದೆ, ಹಸಿವೋ, ಬಾಯಾರಿಕೆಯೋ, ಬೆನ್ನು ನೋವೋ.. ಊಹೂ೦ ಒಂದೂ ನೋಡದೆ ಬರೀ ತೂಕಡಿಸಿ ಕಳೆದ ರಾತ್ರಿಗಳೆಷ್ಟೋ?? ಸ್ವತಹ ತಂದೆ ತಾಯಿಗಳಾಗುವವರೆಗೂ ತಂದೆ ತಾಯಿಯ ಪ್ರೀತಿ
ಮಕ್ಕಳಿಗೆ ಅರಿವಾಗದಂತೆ,, ಹೌದೆನ್ನಿಸುತ್ತಿದೆ ಈಗ.


ಕೋಪ ನುಂಗಿ ಹೊಟ್ಟೆ ತೊಂಬಿಸಿಕೊಳ್ಳುವ, ನೋವಾದರೂ ನಗುವ ಕಲೆಯನ್ನೆಲ್ಲ ನನಗೆ ಕಲಿಸಿದವನು ನನ್ನ ಮಗ ಅಹನ್.
ಅವನ ತುಂಟತನ ನೋಡಿದಾಗೆಲ್ಲ
" ಇವನು ೯ ತಿಂಗಳು ನನ್ನ ಹೊಟ್ಟೆಯಲ್ಲಿ ಅದು ಹೇಗೆ ಸುಮ್ಮನೆ ಕುಳಿತಿದ್ದನೋ" ಅಂತ ಅನ್ನಿಸುತ್ತದೆ.
ಎಂದೂ ಮಾಸದ ನಗು

ಎಲ್ರೂ ಇವನನ್ನ ನಗೆ ಬುಗ್ಗೆ ಅಂತಾನೆ ಕರ್ಯೋದು


ಡ್ರೆಸ್ ಮಾಡ್ಕೊಂಡು ಕುಣಿಯೋದು, ವಾಕಿಂಗ್ ಹೋಗೋದು ಅಂದ್ರೆ ಜೀವ ಇವನಿಗೆ.


ನಮ್ಮ ನಮ್ಮ ಶಿಶುತನ, ಬಾಲ್ಯವನ್ನು ಬದುಕಿದವರು ನಾವೇ ಆದರೂ ಏನೇನೂ ನೆನಪಿರದ ಆದರೆ ನೆನಪಿನಲ್ಲಿಟ್ಟುಕೊಳ್ಳಲೇ ಬೇಕಾದ ಎಷ್ಟೋ ಘಟನೆಗಳನ್ನು ಅಹನ್ ದಿನ ನಿತ್ಯ ತೋರಿಸುತ್ತಲಿರುತ್ತಾನೆ.
ಕಕ್ಕ ಮಾಡಿಕೊಂಡು ಕಲೆದು ಅದನ್ನೇ ಬಾಯಿಗಿಟ್ಟುಕೊಂಡು ವ್ಯಾ ಎಂದಾಗ "ಅಯ್ಯೋ ನಾವೂ ಹೀಗೇ ಮಾಡಿದ್ದೆವಾ"
ಅಂತ ನಗುವೂ ಬರುತ್ತದೆ.

ಸ್ಕೂಲ್ ಗೆ ಹೋಗೋಕೆ ಈವಾಗ್ಲಿಂದಾನೆ ರಿಹರ್ಸಲ್ ನಡ್ಸಿದಾನೆ ಅಹನ್..


ಅಹನ್ ಕಣ್ಣಾಮುಚ್ಚಾಲೆ ಆಡೋದು ಹೀಗೆ...


ಅಹನ್ ನೀನು ಚೈತನ್ಯದ ಚಿಲುಮೆ..

ಓ ಅಹನ್, ನೀನು ನನಗೆ ಉಣ್ಣಿಸುತ್ತಿರುವ ತಾಯ್ತನದ ಸುಖಕ್ಕೆ ನಾನು ಚಿರಋಣಿ ಕಣೋ...