Friday, July 9, 2010

ಸಾಗರಿಯ ಕವನಗಳು

ಕಾಮ(ದ) ದಾಹ..

ಕಾಡಿನ ಸಂದು ಗೊಂದುಗಳಲ್ಲಿ
ಮಿಣ್ಣನವಿತು ಕುಳಿತ
ಕಾಮ
ಮೋಜೆನಿಸಿ
ಕಪ್ಪೆಯಂತೆ ಜಿಗಿದು
ಆಗಸಕ್ಕೇರಿ ಸ್ವರ್ಗ ಸೇರಿತು.

ಕಣ್ಣಿಟ್ಟಲ್ಲೆಲ್ಲಾ ಸಿಂಗಾರ ಬಂಗಾರ
ವರ್ಷವಿಡೀ ವಸಂತ, ಎಂದೂ
ಮಾಸದ ವಸಂತ
ಚೆಲ್ಲಾಡುವ ಹರೆಯ
ಢೊಲು, ಸಂಗೀತ, ಕುಣಿತ
ಸ್ವರ್ಗದವರೆಲ್ಲಾ ಮೀಯುವುದು
ಮದಿರೆಯಲ್ಲೇ ಎಂದು
ಎಂದೋ ಕೇಳಿದ್ದು
ಇಂದು ಕಂಡಂತಾಗಿತ್ತು..,

ಜೀವನ ಪರ್ಯಂತ
ಇಲ್ಲೇ ಇದ್ದು ಬಿಡಬೇಕೆಂದುಕೊಂಡ
ಮರುದಿನವೇ
ಕಾಮ
ಅಲ್ಲಿಯವರ ತೃಪ್ತ ಕಂಗಳ ಕಂಡು
ಕಂಗೆಟ್ಟು ಬರುಡಾಗಿ
ತನ್ನಿರುವಿಗಿಲ್ಯಾವ ಬೆಲೆಯಿಲ್ಲ
ಕಾಮ ಪ್ರೇಮದಲ್ಲಿವರು
ಸಂತುಷ್ಟರೆಂದರಿತು
ದಾರಿ ಕಾಣದಂತಾಗಿ
ಭೂಮಿಗುದುರಿತು..

ಕಂಡಿದ್ದೆನಿಲ್ಲಿ..
ಪ್ರತಿಯೊಬ್ಬರೂ
ದಾಹದಲ್ಲುರಿಯುತ್ತಿರುವ
ಒಂದೊಂದು ಚಿತೆಗಳು,,
ತೀರದ ಕಾಮ
-ದ ಕಡಲಲ್ಲಿ ಮುಳುಗಿದ
ಪ್ರತಿ ದೇಹವೂ ತಣಿಸಲಾರದ
ತುಡಿತದಿಂದ ತಪಿಸುತ್ತಿತ್ತು.

ಕಾಪುರುಷರ ಲೋಕದಲ್ಲಿ
ಕಾಮಕ್ಕೆಲ್ಲಿದೆ ಬಿಡುವು
ದಣಿದಷ್ಟೂ ಖುಶಿ ಕೊಡುವ
ಆಟವಲ್ಲವೇ ಇದು!!

ಹೊಟ್ಟೆಯ ಹಸಿವು, ಕಾಮ-ಮೋಹ
ಎಂದು ತೀರಿದ್ದಿದೆ,
ಪಡೆದಷ್ಟೂ ಬೇಕೆನಿಸಿ ಸುಖಿಸಿ
ಮತ್ತೆ ಹುಡುಕುವ ಚಪಲರ ದಂಡು ಕಂಡು
ಕಾಡು-ಮೇಡು, ಸ್ವರ್ಗದಲ್ಲೆಲ್ಲೂ ಇರದ
ದಾಹದ
ರೌರವವ ನೋಡಿ
ಹಿರಿಮೆಗೊಂಡು
ಕಾಮ,,,
"ಸ್ವರ್ಗಕ್ಕೆ
ಮತ್ತೊಮ್ಮೆ ಕಿಚ್ಚು ಹಚ್ಚೆಂದಿತು.."

46 comments:

ಚುಕ್ಕಿಚಿತ್ತಾರ said...

ಕಾಮ(ದ) ದಾಹ..ವನ್ನು ಸು೦ದರವಾಗಿ ವರ್ಣಿಸಿದ್ದೀರಿ...
ಹೊಸ ಹೊಸ ಕಾಮಕಾ೦ಡಗಳು... ಕಾಪುರುಶರ ಬೀಡಿನಲ್ಲೆ ಸ್ವರ್ಗ ಸ್ರುಷ್ಟಿಸುವುದು ಅಲ್ಲವೇ...?
ಸ್ವರ್ಗದಲ್ಲಿ ಅದಕ್ಕೇನು ಕೆಲಸ... ?

Sushrutha Dodderi said...

ಗುಡ್ ವನ್.. ಚನಾಗ್ ಬರ್ದಿದೀರಿ..

ಸೀತಾರಾಮ. ಕೆ. / SITARAM.K said...

ತೀರದ ನಿರಂತರ ತುಡಿತದ ದಾಹವನ್ನು ಅದ್ಭುತವಾಗಿ ಚಿತ್ರಿಸಿದ್ದಿರಾ....
ಹುಡುಕುವವರ ನಡುವೆ ಅಡಗುವ ಆಟ ಮೋಜಲ್ಲವೇ!!!
ಬಹಳ ಅಚೆ೦ದದ ಕವನ!

ತೇಜಸ್ವಿನಿ ಹೆಗಡೆ said...

ಪ್ರಿಯ ಸಾಗರಿ,

ಕವನದೊಳಗಿನ ಭಾವ- ವ್ಯಂಗ್ಯ, ನೋವು, ವಾಸ್ತವಿಕತೆ ತುಂಬಾ ಮನತಟ್ಟಿತು. ಉತ್ತಮ ಕವನ.

ಜಲನಯನ said...

ನಗ್ನ ಸತ್ಯದ ಬಹುರೂಪಿ ದರ್ಶನ ನಿಮ್ಮ ಕವನ ಸಾಗರಿ...ಕೆಲವು ಘಟನಾವಳಿಗಳನ್ನು ಗಮನಿಸಿದರೆ ನಿಮ್ಮ ಮಾತು ಅಕ್ಷರಶಃ ಸತ್ಯ ಎನಿಸುತ್ತೆ.. ಪ್ರವಾಸಿ ವಿದೇಶದ ಮಹಿಳೆಯರ ಮೇಲೆ ಅತ್ಯಾಚಾರದ ಸುದ್ದಿಗಳು..ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ...ಛೀ...ಎಲ್ಲಿಗೆ ಸಾಗುತ್ತಿದೆ ನಮ್ಮ ವಿವೇಚನಾ ರಹಿತ ಕಾಮಾತುರ ಕಾಪುರುಷ ಮನಸ್ಸು...??

Anonymous said...

ಸಾಗರಿ - ನಿಮ್ಮ ಕವನ ಬಲು ಸೊಗಸಾಗಿದೆ..ಇಂದಿನ ಆಗು ಹೋಗುಗಳನ್ನು ಚಿತ್ರಿಸಿದ ಹಾಗಿದೆ.. ಕಾಮುಕರು ತುಂಬಿರುವ ನಮ್ಮ ಈ ಸಮಾಜ ಅದೆಂದು ಬದಲಾಗುವುದೋ... ಇತ್ತೀಚೆಗೆ ಕೇಳಿದ ಕಥೆ ಅಂದರೆ ಒಬ್ಬ ತಂದೆಯೇ ಅವನ ಮಗಳನ್ನು ಕಾಮಿಯಂತೆ ಕಾಡಿದ್ದು... ಮನಸ್ಸಿಗೆ ಬೇಸರವಾಗುವ ವಿಶಯ...

ಅಂದಹಾಗೆ ನನ್ನ ಬ್ಲೊಗ್ನಲ್ಲಿ ಇಂದು ನಿಮ್ಮೆಲ್ಲರಿಗಾಗಿ ಒಂದು ಹಿಂದಿ ಶಾಯರಿಯನ್ನು ಪ್ರಕಟಿಸಿದ್ದೇನೆ..ನಿಮ್ಮ ಅನಿಸಿಕೆಗಳಿಗಾಗಿ ಎದುರುನೋಡುತ್ತೇನೆ..

Ramesh said...

ಸಾಗರಿ - ನಿಮ್ಮ ಕವನ ಬಲು ಸೊಗಸಾಗಿದೆ..ಇಂದಿನ ಆಗು ಹೋಗುಗಳನ್ನು ಚಿತ್ರಿಸಿದ ಹಾಗಿದೆ.. ಕಾಮುಕರು ತುಂಬಿರುವ ನಮ್ಮ ಈ ಸಮಾಜ ಅದೆಂದು ಬದಲಾಗುವುದೋ... ಇತ್ತೀಚೆಗೆ ಕೇಳಿದ ಕಥೆ ಅಂದರೆ ಒಬ್ಬ ತಂದೆಯೇ ಅವನ ಮಗಳನ್ನು ಕಾಮಿಯಂತೆ ಕಾಡಿದ್ದು... ಮನಸ್ಸಿಗೆ ಬೇಸರವಾಗುವ ವಿಶಯ...

ಅಂದಹಾಗೆ ನನ್ನ ಬ್ಲೊಗ್ನಲ್ಲಿ ಇಂದು ನಿಮ್ಮೆಲ್ಲರಿಗಾಗಿ ಒಂದು ಹಿಂದಿ ಶಾಯರಿಯನ್ನು ಪ್ರಕಟಿಸಿದ್ದೇನೆ..ನಿಮ್ಮ ಅನಿಸಿಕೆಗಳಿಗಾಗಿ ಎದುರುನೋಡುತ್ತೇನೆ..

© ಹರೀಶ್ said...

ಕಾಮ(ದ)ದಾಹ ವರ್ಣನೆ, ಕವನದ ಹಿಡಿತ, ಕವನದ ಕೊನೆಯ ಸಾಲು. ಎಲ್ಲಾವು ಚನ್ನಾಗಿದೆ.

ಸಾಗರದಾಚೆಯ ಇಂಚರ said...

ಸಾಗರಿ
ಅರ್ಥವತ್ತಾದ ಕವನ
ಬದುಕಿನ ಮಜಲುಗಳಲ್ಲಿ ಒಬ್ಬರ ಚಟ ಕ್ಕೆ ಅದೆಷ್ಟೋ ಜನ ಬಲಿಯಾಗುತ್ತಿದ್ದಾರೆ
ಸಮಾಜ ಸುಧಾರಣೆ ಎಂದೋ

ದಿನಕರ ಮೊಗೇರ said...

ಸಾಗರಿ ಮೇಡಂ,
ಕಾಪುರುಷರ ಅತ್ರಪ್ತ ಆತ್ಮಕ್ಕೆ ಗುದ್ದು ಕೊಟ್ಟ ಕವನ ಇದೆ.... ಇಂದಿನ ಜೀವನ ಶೈಲಿ ಸಹ ಈ ರೀತಿಯ ಉಪ ಕ್ರಮಗಳಿಗೆ ಮೂಲವಾ ಗೊತ್ತಿಲ್ಲ..... ಧನ್ಯವಾದ ನಿಮ್ಮ ಕವನಕ್ಕೆ...ನನ್ನ ಬ್ಲಾಗ್ ಗೆ ಬನ್ನಿ....

Raghu said...

ಸಾಗರಿ ಅವರೇ..
ತುಂಬಾ ಚೆನ್ನಾಗಿ ಹೇಳಿದ್ದಿರಿ..ಓದುತ್ತ ಹೋದರೆ ನಾಲ್ಕು ಸಾಲುಗಳ ಕವನ..ನಗ್ನ ಸತ್ಯ ಈ ಕವನದ ಸತ್ಯ!!
ಸ್ವರ್ಗಕ್ಕೆ
ಮತ್ತೊಮ್ಮೆ ಕಿಚ್ಚು ಹಚ್ಚೆಂದಿತು..!!
ನಿಮ್ಮವ,
ರಾಘು.

Vinay Hegde said...

chendada kavana...jagattina nagna satyavanna istu sulabha saalinalli varnisiddiira :) but nimge hedrike aaglilva istu open aagi helodakke????
anyway kavana tumba chennagi moodibandide saagari avare... :)

Dr.D.T.Krishna Murthy. said...

ಸಾಗರಿಯವರೇ;ವಾಸ್ತವ ಚಿತ್ರಣದ ಒಳ್ಳೆಯ ಕವನ.ಧನ್ಯವಾದಗಳು.

sunaath said...

ಸತ್ಯದ ಅನಾವರಣ. ಉತ್ತಮ ಕವನ.

Subrahmanya said...

ಮೈಚಳಿ ಬಿಟ್ಟು, ವಾಸ್ತವವನ್ನು ಕವನವಾಗಿದಿದ್ದು ಸೊಗಸಾಗಿದೆ.
ನಿಮ್ಮ ಧಾಟಿ ಚೆನ್ನಾಗಿದೆ. ಮತ್ತಷ್ಟು ಬರೆಯಿರಿ.

ವಸಂತ ಕುಮಾರ್ ಆರ್, ಕೋಡಿಹಳ್ಳಿ said...

ವಾಸ್ತವದ ಚಿತ್ರಣ ಅರ್ಥ ಪೂರ್ಣ ಕವನ ಚೆನ್ನಾಗಿದೆ ಧನ್ಯವಾದಗಳು.

ವಸಂತ್

V.R.BHAT said...

ಕವನ ಚೆನ್ನಾಗಿದೆ, ಒಂದು ಮಾತು ಸಾಗರಿಯವರೇ- ಈ ಜಗವಿರುವವರೆಗೂ ವಿಟಪುರುಷರ ಆತ ನಡೆದೇ ಇರುತ್ತದೆ! ಕೆಲವು ಗೊತ್ತಾದರೆ ಇನ್ನೂ ಕೆಲವು ನಿಗೂಢ, ಕೆಲವು ಸತ್ಯವೋ ಅಸತ್ಯವೋ ಎಂಬ ಸಂಶಯ ಹುಟ್ಟಿಸುವಂಥದು-ನಮ್ಮ ಸದರಿ ಸರಕಾರದ ಹಾಲಪ್ಪ ಇದ್ದಹಾಗೆ! ಧನ್ಯವಾದಗಳು

ಮನಸಿನಮನೆಯವನು said...

ಸಾಗರಿ.. ,
ತುಂಬಾ ಚೆನ್ನಾಗಿ ವಾಸ್ತವ ತಿಳಿಸಿದ್ದೀರಿ..
ಎಷ್ಟಾದರೂ ಕಾಪುರುಷರಿಗೆ "ಕಾಮಾತುರಾಣಾನಂ ಭಯಾನಂ ಲಜ್ಜಾಂ" ಅಲ್ಲವೇ/.?

ಸಾಗರಿ.. said...

ಜಯಶ್ರೀ ಅವರೇ,
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಹೊಸ ಕಾಮಕಾಂಡಕ್ಕೆ ಮತೊಂದು ಅಧ್ಯಾಯ ಬರೆದವ ಮೊನ್ನೆ ಮೊನ್ನೆ ಸ್ನೇಹಿತನ ತಾಯಿಯನ್ನೇ ಅತ್ಯಾಚಾರ ಎಸಗಿ ಕೊಲೆ ಎಸೆದವ.. ಯಾರನ್ನು ನಂಬೋಣ??

ಸಾಗರಿ.. said...

ಸುಶ್ರುತ ಅವರೆ,
ಕವನ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

ಸಾಗರಿ.. said...

ಗುರು ಅವರೆ,
ಹೊಟ್ಟೆಯ ಹಸಿವೋ ಕಾಮದ್ದೋ ಒಟ್ಟಿನಲ್ಲಿ ಜಗತ್ತಿನ ಎಲ್ಲಾ ಕಾರ್ಯಕ್ಕು ಮೂಲ ಹಸಿವು. ಎಲ್ಲಾ ಸಮಸ್ಯೆಗಳಿಗೆ ಮೂಲವೂ ಇದೇ ಆಗಿದೆ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಸಾಗರಿ.. said...

ಕೃಷ್ಣಮೂರ್ತಿ ಅವರೆ,
ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

ಸಾಗರಿ.. said...

ಕಾಕ,
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ತಮ್ಮ ಬರಹದ ನಿರೀಕ್ಷೆಯಲ್ಲಿರುವೆ.

ಸಾಗರಿ.. said...

ಸೀತಾರಾಮ್ ಅವರೇ,
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಈಗಿನ ಎಷ್ಟೋ ಮಂದಿ ಬಾಯಾರಿಕೆ ತ್ತ್ಳಲು ಸಿದ್ಧರಿದ್ದಾರೆ ಆದರೆ ಕಾಮದಾಹವನ್ನಲ್ಲ. ಅವರ ದಾಹಕ್ಕ್ಕೆ ಬಲಿಯಾದವರು ಮಾತ್ರ ಅಮಾಯಕರೇ..

ಸಾಗರಿ.. said...

ತೇಜಸ್ವಿನಿ ಅವರೆ,
ತಾವು ನನ್ನನ್ನು ಪ್ರಿಯ ಎಂದು ಸಂಭೋಧಿಸಿದ್ದು ಬಹಳ ಆತ್ಮೀಯ ಎನ್ನಿಸಿತು. ತಮ್ಮ ಮೆಚ್ಚುಗೆಗೆ ಧನ್ಯವಾದಗಳು.

ಸಾಗರಿ.. said...

ಅಜಾದ್ ಸರ್,
ಎಲ್ಲಿಯವರೆಗೆ ಅನ್ಯಾಯ ಅತ್ಯಾಚಾರ ಎಸಗುವವರು ಕಠಿಣ ಸಜೆಗೊಳಗಾಗುವುದಿಲ್ಲವೋ ಅಲ್ಲಿಯವರೆಗೂ ಇದು ಇದ್ದಿದ್ದೇ ಅನ್ನಿಸುತ್ತದೆ. ಬಹಳ strong and tight ಕಾನೂನಿನ ಅವಶ್ಯಕತೆ ಇದೆ ಅನ್ನಿಸುತ್ತದೆ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರಿ.. said...

ರಮೇಶ್ ಅವರೆ,
ನಮ್ಮ ಹಳ್ಳಿಗಳಲ್ಲಿ ಕೆಳಗಿನವರಲ್ಲಿ ತಂದೆಯೇ ಹೊರಿಸಿದ ಮಗಳ ಬಸಿರನ್ನ ಇಳಿಸಲ್ಲು ದವಾಖಾನೆಗೆ ತರುವುದು ಬಹಳ ಸಾಮಾನ್ಯವಾಗುತ್ತಿದೆ. ಇಂಗ್ಲೀಷನಲ್ಲ್ಲಿ ಒಂದು ನಾಟಕವಿದೆ ತಂದೆಯೇ ತನ್ನ ಮಗಳ ಮಗುವಿಗೆ ಕಾರಣನಾದರೆ ಆ ಮಗುವಿಗೆ ಆತ ತಂದೆ ಆಗ್ತಾನೋ ಅಜ್ಜ ಆಗ್ತಾನೋ ಅಂತ ಪೇಚಾಟ.. ತಮ್ಮ ಅಭಿಪ್ರಾಯಕೆ ಧನ್ಯವಾದಗಳು.

ಸಾಗರಿ.. said...

ದಿನಕರ್ ಅವರೇ,
ಹೊಸ photo upload ಮಾಡಿದಂತಿದೆ.. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಸಿಗರೇಟಿನ ಕತೆಯನ್ನು ಓದಿ ಮನಸ್ಸು ತುಂಬಿ ನಕ್ಕಿದ್ದೇನೆ. ತಾವೂ ಬಹಳ ಚೆನ್ನಾಗಿ ಬರೀತೀರಿ.

ಸಾಗರಿ.. said...

ರಾಘು ಅವರೇ,
ಯಾರಿಗೇ ಈ ಲೋಕ ಹಿಡಸಲಿ ಬಿಡಲಿ ಕಾಮಕ್ಕಂತೂ ಈ ಲೋಕ ಹಿಡಿಸಿ ಠಿಕಾಣಿ ಹೂಡಿದೆ ನೋಡಿ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರಿ.. said...

ವಿನಯ್ ಅವರೇ,
ತಮ್ಮ ಅಭಿಪ್ರ್ರಾಯಕ್ಕೆ ಧನ್ಯವಾದಗಳು. ಇದ್ದಿದ್ದನ್ನು ಹೇಳಿದ್ದೇನೆ. ಎಲ್ಲಿಯೂ ಭಾಷೆ ಎಲ್ಲೆ ಮೀರಿ ಮುಜುಗರ ತರಿಸದಂತೆ ಹೇಳಿದ್ದೇನೆ ಎಂದುಕೊಳ್ಳುತ್ತೇನೆ. ಬರುತ್ತಿರಿ.

ಸಾಗರಿ.. said...

ಶಂಭುಲಿಂಗ ಅವರೇ,
ತಮ್ಮ ಪ್ರೋತ್ಸಾಹಕ್ಕೆ ಮತ್ತು ಅಭಿಪ್ರಾಯಕ್ಕೆ ಧನ್ಯವಾದಗಳು.

ಸಾಗರಿ.. said...

ವಸಂತ್ ಅವರೆ,
ತಮಗೆ ನನ್ನ ಬ್ಲಾಗಿಗೆ ಸ್ವಾಗತ ಮತ್ತು ತಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಸಾಗರಿ.. said...

ವಿ.ಅರ್.ಭಟ್ ಅವರೆ,
ತಮ್ಮ ಮಾತೂ ನಿಜ. ಮಾನವನ ಕೆಲವು ಕ್ರೌರ್ಯಕ್ಕೆ ಕೊನೆಯೇ ಇಲ್ಲ ಎನ್ನಿಸುತ್ತದೆ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಸಾಗರಿ.. said...

ಮನಸಿನ ಮನೆಯವರೇ,
exams ಎಲ್ಲ ಮುಗಿದವೆ? ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಸಾಗರಿ.. said...

ಹರೀಶ ಅವರೇ,
ಕೆಲವೊಂದು ಕಾರಣದಿಂದಾಗಿ ನನ್ನ reply ಗಳು ಮೇಲೆ ಕೆಳಗೆ ಆಗಿ ಸಾಲಿನಲ್ಲಿ ಬರಲಿಲ್ಲ. ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

ಅನಂತ್ ರಾಜ್ said...

ವಾಸ್ತವಿಕತೆಯ ನಗ್ನತೆ..ನಾಗರೀಕತೆಯ ವಿಲಕ್ಷಣತೆ..ತು೦ಬಾ ಪರಿಣಾಮಕಾರಿಯಾಗಿ ಚಿತ್ರಿಸಿದ್ದೀರಿ..
ಮನಸ್ಸಿಗೆ ಒ೦ದು ವಿಚಾರವನ್ನು ಕೊಟ್ಟಿರಿ..
ಹೀಗೆ ಬರೆಯುತ್ತಿರಿ..

ಶುಭಾಶಯಗಳು
ಅನನ್ತ್

Ittigecement said...

ಸಾಗರಿ...

ಕಾಮದಾಹ..
ಕ್ರೌರ್ಯದ ವಾಸ್ತವ ಚಿತ್ರಣ ಬಿಡಿಸಿಟ್ಟಿದ್ದೀರಿ..

ಚಂದದ ಸಾಲುಗಳಿಗೆ ಅಭಿನಂದನೆಗಳು..

shivu.k said...

ಕಾಮ ದಾಹ, ಇತ್ಯಾದಿ ಕಾವ್ಯದೊಳಗಿನ ದುಗುಡಗಳು ಮನತಟ್ಟಿತು. ಚೆನ್ನಾಗಿದೆ ಕವನ.

ಸಾಗರಿ.. said...

ಅನಂತ ಅವರೆ,
ನನ್ನ ಬ್ಲಾಗಿಗೆ ಸ್ವಾಗತ ತಮಗೆ. ಕಾಮ ಮತ್ತೊಂದು ಹಸಿವು ಯಾರನ್ನಾದರೂ ಎಂತಹ ಕೆಲಸಕ್ಕಾದರೂ ನೂಕಬಹುದು. ಎಷ್ಟೇ ದೊಡ್ಡವನಾದರೂ ಮನುಷ್ಯ ಪ್ರ್ರಣಿಯೇ ತಾನೆ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಬರುತ್ತಿರಿ.

ಸಾಗರಿ.. said...

ಪ್ರಕಾಶಣ್ಣ,
ಬರೆದದ್ದನ್ನ ಪ್ರೀತಿಯಿಂದ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಎಷ್ಟೇ ವ್ಯಂಗ್ಯವಾಗಿ ಬರೆದರೂ ಕ್ರೂರತೆಯ ಆಳ ಎಟುಕದ್ದು ಅನ್ನಿಸಿದೆ.

ಸಾಗರಿ.. said...

ಶಿವೂ ಅವರೇ,
ತಮಗೆ ನನ್ನ ಬ್ಲಾಗಿಗೆ ಸ್ವಾಗತ. ಅಹನ್ ನಿಂದ ಕೆಲವು ಸಮಯವನ್ನು ಕದ್ದು ಆಗಾಗ ಬರೆಯುವ ಪ್ರಯತ್ನವಿದು ಅಷ್ಟೇ. ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಕೇವಲ ಹೊಗಳಲಷ್ಟೇ ಅಲ್ಲ ತೆಗಳುವುದಕ್ಕೂ ಆಗಾಗ ಬರುತ್ತಿರಿ. ಧನ್ಯವಾದಗಳು.

shridhar said...

ಸಾಗರೀಯವರೆ,
ವರ್ತಮಾನಕ್ಕೆ ಹಿಡಿದ ಕನ್ನಡಿಯಂತಿದೆ ನಿಮ್ಮ ಕವನ.


ನನ್ನ ಬ್ಲೊಗಗೂ ಸಾಧ್ಯವಾದರೆ ಒಮ್ಮೆಬೇಟಿ ಕೊಡಿ.
ಶ್ರೀಧರ

ಮನಮುಕ್ತಾ said...

ನೇರ ಶಬ್ದಗಳಲ್ಲಿ ಚೆನ್ನಾಗಿ ವರ್ಣಿಸಿದ್ದೀರಾ.... ಕವನ ಚೆನ್ನಾಗಿದೆ.

ಸಾಗರಿ.. said...

ಶ್ರೀಧರ್ ಅವರೆ,
ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು, ತಮ್ಮ ಬ್ಲಾಗಿ ಗೆ ನಾನು ಖಂಡಿತಾ ಬರುವೆ.

ಸಾಗರಿ.. said...

ಮನಮುಕ್ತಾ ಅವರೇ,
ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ

Manjunatha Kollegala said...

"ಕಾಪುರುಷರ ಲೋಕದಲ್ಲಿ
ಕಾಮಕ್ಕೆಲ್ಲಿದೆ ಬಿಡುವು"

ವಾಹ್ ವಾಹ್... very nice poem