Thursday, February 18, 2010

ದುಡ್ಡೇ ದೊಡ್ಡಪ್ಪನಲ್ಲದಿದ್ದರೂ ಚಿಕ್ಕಪ್ಪನಂತೂ ಹೌದು!!!
ದುಡ್ಡೇ ದೊಡ್ಡಪ್ಪನಲ್ಲದಿದ್ದರೂ ಚಿಕ್ಕಪ್ಪನಂತೂ ಹೌದು!!!


ಇಂದಿನವರೆಗೆ ಎಂದಿಗೂ ಒಂದು ನಯಾ ಪೈಸೆ ವ್ಯರ್ಥವಾಗಿ ವ್ಯಯಿಸಿದವಳು ನಾನಲ್ಲ. ತೀರಾ ಬಡತನ ತಿಳಿಯದಿದ್ದರೂ ಸಿರಿವಂತಿಕೆಯ ಸುಪ್ಪತ್ತಿಗೆಯನ್ನೇನೂ ಕಂಡವಳಲ್ಲ. ಮಧ್ಯಮ ವರ್ಗದ ಪುಟ್ಟ ಸಂಸಾರದಲ್ಲಿ ಬೆಳೆದೆ ನಾನು.

ಇವತ್ತಿನವರೆಗಿನ ಜೀವನದ ಎರಡು ಘಟನೆಗಳು ಮಾತ್ರ ನಯಾ ಪೈಸೆಯ ಮಹತ್ವ ಮರೆಯಲಾಗದಂತೆ ತಿಳಿಸಿಕೊಟ್ಟಿವೆ. ದುಡ್ಡು ಎಲ್ಲಾಕ್ಕೂ ಮಿಗಿಲಲ್ಲ ಅಂತ ತೋರಿಸಿದ ಅಂಗಡಿಯಾತ, ಐವತ್ತು ಪೈಸೆಗೂ ಪರದಾಡಿ ದುಡ್ಡಿಲ್ಲದೆ ಬದುಕುವುದು ಎಷ್ಟು ದುಸ್ತರ ಎಂದು ತೋರಿಸಿದ ಮತ್ತೊಂದು ಘಟನೆ,, ಆ ಕ್ಷಣಕ್ಕೆ ಆಕಾಶ ಮೇಲಿರಲು ಕಾರಣ ಆಕಾಶವನ್ನು ನನ್ನ ತಲೆಯ ಮೇಲೆ ಹೊತ್ತಿರುವುದರಿಂದ ಎಂದು ಗಟ್ಟಿಯಾಗಿ ನಂಬುವಷ್ಟರ ಮಟ್ಟಿಗೆ ನಾನು ದಿಗಿಲುಗೊಂಡಿದ್ದೆ. ನನ್ನ ರೇಟಿಗೆ ಸಿಗದ ಸೀರೆ ನೆನೆದು ಆತಂಕಪಟ್ಟಿದ್ದು... ಸಿಲ್ಲಿ ಸಂಗತಿ ಅಂತ ನಿಮಗೆ ಎನ್ನಿಸಿದರೂ ಕೈಲಿ ಇನ್ನೊಂದಿಷ್ಟು ದುಡ್ಡು ಇದ್ದಿದ್ದರೆ ಅಂತ ನನಗಾಗ ಅನ್ನಿಸದೆ ಇರಲಿಲ್ಲ ನನಗೆ.

ನಾಲ್ಕು ವರ್ಷಗಳ ಹಿಂದೆ ಧಾರವಾಡದಲ್ಲಿ M.A ಓದುವಾಗಿನ ಘಟನೆ ಇದು, ಆಗ ನಾನು ಹಾಸ್ಟೆಲ್ ನಲ್ಲಿದ್ದೆ. ಬೆಳಿಗ್ಗೆಯ ತಿಂಡಿಗೆ ಮೂರು ರೂಪಾಯಿ. ತಿಂಡಿ ನಮಗೆ ಆಪ್ಷನಲ್, ಬೇಕಾದ್ರೆ ತಗೋಬಹುದು. ನಾನು ದಿನದ ಖರ್ಚಿನ ಲೆಕ್ಕದಲ್ಲಿ ಮೂರು ರೂಪಾಯಿ ಬೆಳಿಗ್ಗೆಯ ನಾಷ್ಟಾ ಅಂತ ಬರೆದು ಆ ಮೂರು ರೂಪಾಯಿಯನ್ನು ನನ್ನ ಸೇವಿಂಗ್ ಬಾಕ್ಸಿಗೆ ಹಾಕ್ತಿದ್ದೆ. ಊರಿಗೆ ಹೋಗುವಾಗ ಒಟ್ಟಾದ ದುಡ್ಡಲ್ಲಿ ಆಯಿಗೆ ಒಂದು ಸೀರೆ ಕೊಂಡೊಯ್ಯುವುದು ನನ್ನ ರೂಢಿ ಅಗಿತ್ತು. ಫೈನಲ್ ಈಯರ್ MA(economis) ಲಿ ಇದ್ದಾಗ ಸರಿ ಸುಮಾರು ಒಂಬೈನೂರು ರೂಪಾಯಿ ಸೇರ್ಸಿದ್ದೆ. ಮದರ್ಸ್ ಡೇ ಗೆ ಆಯಿಗೆ ಒಂದು ಗ್ರ್ಯಾಂಡ್ ಸೀರೆ ಕೊಡ್ಸೊ ಆಸೆ ನಂಗೆ.

ಒಂದಿನ ಒಟ್ಟು ಒಂಬೈನೂರಾ ಐವತ್ತು ರೂಪಾಯಿ ತಗೊಂಡು ಇಬ್ಬರು ಗೆಳತಿಯರೊಂದಿಗೆ ಸಿಬಿಟಿ ಬಂದು ಸೀರೆಗಾಗಿ ಜವಳಿ ಅಂಗಡಿಗಳನ್ನೆಲ್ಲಾ ಸುತ್ತುತ್ತಿರುವಾಗ ಒಂದು ಅಂಗಡಿಯಲ್ಲಿ ಡಿಸ್ಪ್ಲೇ ಗೆ ಹಾಕಿದ ಸೀರೆ ನಂಗೆ ತುಂಬಾ ಇಷ್ಟವಾಗಿ ಹೋಯ್ತು. ಬೆಳ್ಳಗೆ ಮುದ್ದಾಗಿರುವ ನನ್ನ ಚಂದದ ಆಯಿಗೆ ಈ ಸೀರೆ ಬಹಳ ಒಪ್ಪುತ್ತದೆನಿಸಿ ಕೊಂಡರೆ ಈ ಸೀರೇನೇ ಕೊಳ್ಬೇಕು ಅಂತ ನಿರ್ಧರಿಸಿ ಅಂಗಡಿ ಒಳ್ಗೆ ತೂರಿಕೊಂಡೆ. ರೇಟ್ ಗೀಟ್ ಏನೂ ಕೇಳ್ಲಿಲ್ಲಾ, "ಡಿಸ್ಪ್ಲೇಗೆ ಹಾಕಿದ ಸೀರೆ ತೋರ್ಸಿ" ಅಂದೆ. ಮರೂನ್ ಕಲರ್ ಸೀರೆಗೆ ಸಿಲ್ವರ್ ಕಲರ್ ಬಾರ್ಡರ್, ಪಲ್ಲು ಗೆ ಕೂಡಾ ತುಂಬಾ ಗ್ರ್ಯಾಂಡ್ ಲುಕ್ ಇತ್ತು. ಸರಿ "ರೇಟ್ ಎಷ್ಟಪ್ಪಾ" ಅಂತ ಕೇಳಿದೆ. ಅಂಗಡಿಯಾತ "ಸಾವಿರದ ನಾನೂರ್ರಿ" ಅಂದ. ಅದಕ್ಕೆ ನಾನು " ಈ ಸೀರಿ ತಗೋತೀನ್ರಿ ನಾನು, ಇದ್ನ ಒಂಬೈನೂರ್ ಮಾಡ್ಕೊಂಡ್ ಕೊಡ್ರಿ, ಭಾಳ ಪಸಂದಾಗೈತಿ ನಂಗ" ಅಂದೆ.
ಅಂಗಡಿಯಾತ ನಕ್ಕು "ಛಲೋ ಹೇಳ್ತೀರ್ ಬಿಡ್ರಿ, ನಮ್ದು ಫಿಕ್ಸ್ದ್ ರೇಟ್ ಅಂಗ್ಡಿ ನೋಡ್ರಿ. ಸಾವಿರದ ಮುನ್ನೋರ್ರ ಕಡ್ಮಿಗಿಲ್ಲಾ. ಬೇಕಾದ್ರ ತಗೋರಿ. ರೇಟ್ ಹೆಚ ಹೇಳಿ ಆಮ್ಯಾಲ್ ಕಡ್ಮಿ ಮಾಡ್ ಕೊಡೋ ಮಂದ್ಯಾಗಿಲ್ಲ ನಾವು"

ನನ್ನ ಕೈಲಿದ್ದಿದ್ದು ಬರಿ ಒಂಬೈನೂರು, ಜೊತೆಗೆ ಐವತ್ತು ರೂಪಾಯಿ ಬಸ್ ಖರ್ಚಿಗೆ (ಬಸ್ಸಿಗೆ ಹೋಗಿ ಬರಲು ಹತ್ತು ರೂಪಾಯಿ, ಬಾಕಿದು ಸೇಫ್ಟಿ ಮನಿ). ಅಂಗಡಿಯಾತನಲ್ಲಿ ಬೇಕಷ್ಟು ವಿನಂತಿಸಿದೆ. ನನ್ನಲ್ಲಿರೋದು ಬರೀ ಒಂಬೈನೂರೇ ರೂಪಾಯಿ ಅಂತ ಪರ್ಸೂ ತೆಗೆದು ತೋರಿಸಿದೆ. ಆತ ಬಗ್ಗದೆ ಅದೇ ರೇಟಿನ ಬೇರೆ ಸೀರೆ ತೋರಿಸ್ತೀನಿ ಅಂತ ಹಠ ಹಿಡಿದ. ನಂಗೆ ತುಂಬಾ ಬೇಸರವೆನಿಸಿ ಅಂಗಡಿಯಿಂದ ಹೊರ ಬಂದೆ. ಮತ್ತೂ ಒಂದಿಷ್ಟು ಅಂಗಡಿ ಸುತ್ತಿದರೂ ನನ್ನ ಚಂದದ ಆಯಿಗೆ ಒಪ್ಪುವ ಚಂದದ ಸೀರೆ ಕಣ್ಣಿಗೆ ಬೀಳಲಿಲ್ಲ. ಮತ್ತದೇ ಅಂಗಡಿಯ ಹೊರಗೆ ಬಂದು ನಿಂತೆ, ಒಳಗೆ ಹೋಗಿ ಬಾರ್ಗೇನು ಮಾಡಿದರೂ ಪ್ರಯೋಜನವಿಲ್ಲ ಅಂತ ಗೊತ್ತಿತ್ತು.

ಸ್ವಲ್ಪ ಹೊತ್ತಿನ ಬಳಿಕ ಆ ಅಂಗಡಿಯವನಿಗೆ ಏನನ್ನಿಸಿತೋ ಗೊತ್ತಿಲ್ಲ "ತಂಗೀ ಬಾರವ್ವಾ ಇತ್ತ,, ಒಂದು ಕೆಲಸ ಮಾಡವ್ವ ಒಂಬೈನೂರು ಕೊಡು, ಈ ಸೀರಿ ಎತ್ತಿಡ್ತೀನಿ. ಒಂದ್ವಾರದೊಳ್ಗ ಮತ್ತ ನಾನೂರು ಕೊಟ್ಟು ಒಯ್ಯಿ ಈ ಸೀರೀನ. ಒಂಬೈನೂರಕ್ಕ ರಸೀದಿ ಹರೀಲೇನು?" ಅಂದ. ಆಗೆಲ್ಲ ಒಂದು ವಾರದಲ್ಲಿ ನಾಲ್ಕು ನೂರು ಸೇರಿಸೋದು ಅಸಾಧ್ಯದ ಮಾತು.
ನಾನೆಂದೆ "ಅಣ್ಣಾ ನನ್ಕೂಡ್ ಇಷ್ಟ್ ಜಲ್ದಿ ನಾನೂರು ಸೇರ್ಸೂದು ಭಾಳ ಕಷ್ಟ, ಆಗೋದೇ ಇಲ್ಲಾ ಅಂದ್ಕೋರಿ. ಬರೋ ಭಾನ್ವಾರಾನೆ ಊರಿಗೆ ಹೊಂಟೇನಿ, ಈ ಸೀರಿ ತಾಯಿಗ ಕೊಡ್ಬೇಕು ಮಾಡೇನಿ. ಒಂಬೈನೂರಕ್ಕ ಕೊಡೋದಾದ್ರ ಕೊಡ್ರಿ" ಅಂದೆ. ನನ್ನ ಧ್ವನಿ ಭಾರವಾಗಿತ್ತೋ ಅಥವಾ ಅಂಗಡಿಯವನ ಮನಸ್ಸು ಕರಗಿತ್ತೋ "ಸಾವಿರದ ಎರಡು ನೂರಕ್ಕೂ ಈ ಸೀರಿ ಕೊಟ್ಟಿರ್ಲಿಲ್ಲಾ. ನಿನ್ ರೇಟಿಗೇ ತಗೋವ್ವಾ ಈ ಸೀರಿ" ಅಂದ. ನನಗಾದ ಖುಷಿಗೆ ಪಾರವೇ ಇರ್ಲಿಲ್ಲ. ಅಂಗಡಿಯವನಿಗೆ ತುಂಬು ಮನಸ್ಸಿನಿಂದ ಧನ್ಯವಾದ ಹೇಳಿ ಹೊರಟೆ.

ಇದಾದ ಮರು ವರ್ಷವೇ ನನ್ನ ಮದುವೆ ನಿಕ್ಕಿ ಆಯ್ತು. ಮದುವೆಗೆ ಅಂತ ಆಯಿ, ನಾನು ಇಬ್ರು ಒಂದಿಷ್ಟು ರೇಷ್ಮೆ ಸೀರೆ ಜೊತೆಗೆ ಒಂದೊಂದು ಭರ್ಜರಿ ಕಾಂಜೀವರಮ್ ಸೀರೆ ತಗೊಂಡ್ವಿ. ಸೀರೆಗೆ ಫಾಲ್ ಹಚ್ಚಿಸಿ, ಬ್ಲೌಸ್ ಹೊಲಿಸಿ ಜಬರ್ದಸ್ತ್ ತಯಾರಾದ್ವಿ ಮದುವೆಗೆ.

ಮದುವೆ ದಿನ ಮದುವೆ ಮಂಟಪಕ್ಕೆ ಹೊರಡುವಾಗ ಅಪ್ಪ, ಆಯಿಗೆ ನಮಸ್ಕರಿಸಲು ಮುಂದಾದರೆ ನನ್ನ ಆಯಿ ದುಬಾರಿಯ ಕಾಂಜೀವರಮ್ ಬದಲು ನನ್ನ ಒಂಬೈನೂರರ ಸೀರೆ ಉಟ್ಟಿದ್ದಳು. ಆಯಿ ಆ ಸೀರೆಯಲ್ಲಿ ತುಂಬಾ ಚಂದ ಕಾಣಿಸ್ತಿದ್ಲು. ನನ್ನ ಕಣ್ಣಲ್ಲಿ ನೀರು.. ಆಯಿಗೂ ತಿಳೀತು ನಾನು ಭಾವುಕಳಾಗಿದ್ದು. ನನ್ನ ಬೆನ್ನು ತಡವಿ "ಮಗ ತೀಡಡ, ಎಲ್ಲಾ ಸೀರೆಗಿಂತ ಈ ಸೀರೆನೇ ನಂಗೆ ಮನ್ಸಿಗೆ ಬಂತು,, ಇದರಲ್ಲಿ ಎಷ್ಟು ಪ್ರೀತಿ ಇದ್ದು ಗೊತ್ತಿದ್ದ???ಅದ್ಕೆ ಉಟ್ಕಂಡೆ" ಅಂದಳು.....

ನಾನು ಬೆಳೆಗ್ಗಿನ ಆಸರಿಯನ್ನು(ನಾಷ್ಟಾ) ಒಂದು ದಿನವೂ ಕುಡಿಯದೆ ಕ್ಲಾಸ್ ಅಟೆಂಡ್ ಮಾಡಿದ್ಯಾವ್ದು ನಂಗೆ ದುಬಾರಿ ಬೀಳಲಿಲ್ಲ ಎನ್ನಿಸಿತು. ಪುಣ್ಯಾತ್ಮ ಅಂಗಡಿಯಾತನೂ ನೆನಪಾಗದೆ ಇರಲಿಲ್ಲ......

ನಯಾ ಪೈಸೆಯ ಮಹತ್ವ ತಿಳಿಸಿದ ಮತ್ತೊಂದು ಘಟನೆಯನ್ನೂ ಪುಟ್ಟದಾಗಿ ಹೇಲಿಬಿಡಲೇ???

ನಾನು IFMR(Institution for Financial Management and Research) ಲ್ಲಿ ಫೀಲ್ಡ್ ಇನ್ವೆಸ್ಟಿಗೇಟರ್ ಆಗಿ ಆಗ ತಾನೆ ಸೇರಿದ್ದೆ, ದೊಡ್ಡಬಳ್ಳಾಪುರದ ಆಯ್ದ ಹಳ್ಳಿಗಳಿಗೆ ದಿನವೂ ಭೇಟಿ ನೀಡಬೇಕಿತ್ತು. ಬೆಂಗಳೂರಿಂದ ಪ್ರತಿದಿನ ಹೋಗಿ ಬರುವುದು.ಆ ದಿನಗಳಲ್ಲಿ ನೂರೈವತ್ತಕ್ಕಿಂತ ಜಾಸ್ತಿ ಹಣವನ್ನೆಂದೂ ಒಯ್ಯುತ್ತಿರಲಿಲ್ಲ. ಅಷ್ಟಕ್ಕೂ ಅವಶ್ಯ ಬಿದ್ದರೆ ATM credit card ಇದ್ಯಲ್ಲ ಅಂತ. ಅಲ್ಲದೆ ಮೆಜೆಸ್ಟಿಕ್ ವರೆಗೆ ಬಂದು ಮುಟ್ಟಿದರೆ ಇಬ್ಬರು ಕಲೀಗ್ಸ್ ನನ್ನ ಜಾಯ್ನ್ ಅಗ್ತಾರಲ್ಲ ಅಂತ ಧೈರ್ಯ.

ಒಂದಿನ ರಾತ್ರಿ ನನ್ನ ಪರ್ಸನ್ನೆಲ್ಲಾ ಕ್ಲೀನ್ ಮಾಡಿ, ಬೇಡದ ರಶೀದಿ, ಟಿಕೇಟನ್ನೆಲ್ಲ ಕಸದ ಬುಟ್ಟಿಗೆ ಸ್ಥಳಾಂತರಿಸಿದ್ದೆ. ಮರುದಿನ ಬೆಳಿಗ್ಗೆ ಎಂದಿನಂತೆ "ಲೇಟ್ ಆಗೋಯ್ತಕ್ಕ"(ನನ್ನ ಹಾಸ್ಟೇಲ್ ಮೇಟ್,,,ಧಾರವಾಡದಲ್ಲಿ ಎಕಾನಮಿಕ್ಸ್ ದಿಪಾರ್ಟ್ಮೆಂಟಲ್ಲಿ ನನ್ನ ಸೀನಿಯರ್ ಆಗಿದ್ದಳು, ಎಲ್ಲಾಕ್ಕೂ ಮಿಗಿಲಾಗಿ ನನ್ನ ಪ್ರೀತಿಯ ಅಕ್ಕ ಆಗಿದ್ದಳು) ಅಂತ ಗಡಬಡಿಸಿ ಹೊರಟೆ. ಬಸ್ ನಿಲ್ದಾಣ ತಲುಪುವಷ್ಟರಲ್ಲಿ ಮೆಜೆಸ್ಟಿಕ್ ಬಸ್ ಬಂತು, ಏರಿ ಕುಳಿತೆ. ಕಂಡಕ್ಟರ್ ಟಿಕೇಟಿಗೆ ಬರುವಾಗ ಅದಾಗಲೇ ಎರಡು ಸ್ಟಾಪ್ ದಾಟಿತ್ತು ಬಸ್ಸು. ನಾನು ಟಿಕೇಟು ತೆಗೆಯಿಸಲು ದುಡ್ಡಿಗಾಗಿ ಪರ್ಸಿಗೆ ಕೈ ಹಾಕಿದರೆ ದಿನದ ರೂಢಿಯಂತೆ ಇಂದು ಹಣ ತೆಗೆದು ಪರ್ಸಲ್ಲಿಡುವ ಬದಲು ಕನ್ನಡಿ ಎದುರೇ ಬಿಟ್ಟು ಬಂದಿದ್ದೆ. ಪರ್ಸೆಲ್ಲಾ ತಡಕಾಡಿದರು ಎಂಟೂವರೆಗಿಂತ ಹೆಚ್ಚು ದುಡ್ಡು ಸಿಗಲಿಲ್ಲ. ಆಗ ನಾಗರ ಭಾವಿಯಿಂದ ಮೆಜೆಸ್ಟಿಕ್ಕಿಗೆ ಒಂಭತ್ತು ರೂಪಾಯಿ ಟಿಕೇಟು. ಭಯ ಆಗಿ ಅಕ್ಕನಿಗೆ ಫೋನಾಯಿಸಿದೆ. ಅಕ್ಕ "ಹೆದರ್ಬೇಡ ಎಲ್ಲಿದ್ದೀಯಾ ಹೇಳು, ದುಡ್ಡು ತಂದುಕೊಡ್ತೀನಿ" ಅಂದ್ಲು. ಬಸ್ಸು ನಾಗರಭಾವಿ ದಾಟಿ ಅದಾಗ್ಲೇ ಮುಂದೆ ಬಂದು ಬಿಟ್ಟಿತ್ತು. "ಬರೀ ಐವತ್ತು ಪೈಸೆ ಕಡ್ಮೆಯಿದೆ " ಅಂತ ಹೇಳೊವರೆಗೆ ನನ್ನ ಧ್ವನಿಯೆಲ್ಲಾ ನಡುಗಿ ಅಳು ಬಂದಂತಾಗಿತ್ತು. ಅಕ್ಕನಿಗೂ ಏನ್ಮಾಡ್ಬೇಕು ಅಂತ ತಿಳೀಲಿಲ್ಲ.

ಅರಿಯದ ಊರಲ್ಲಿ ದುಡ್ಡು ಕಳೆದು ಹೋದ್ರೆ ದಿಗಿಲಾಗುವುದು ಸಹಜ. ಆದರೆ ಪ್ರತಿದಿನ ಓಡಾಡುವ ರೂಟ್, ಅದೇ ಊರು, ಹಾಸ್ಟೆಲ್ ನಿಂದ ಕೇವಲ ೩-೪ ಕಿ.ಮೀ ದೂರ ಬಂದಿರೋ ಬಸ್ಸಲ್ಲಿ ಕುಳಿತ ನಾನು ಕೈಯಲ್ಲಿ ATM ಕಾರ್ಡ್ ಇದ್ರೂ ಐವತ್ತು ಪೈಸೆಗೆ ಪರದಾಡುವ ಸ್ಥಿತಿ....

ಅಷ್ಟಕ್ಕೇ ನನ್ನ ಪಕ್ಕದಲ್ಲಿ ಕುಳಿತಿದ್ದ ಕಾಲೇಜು ಹುಡುಗಿಯೊಬ್ಬಳು ನನ್ನನ್ನೇನೂ ಕೇಳದೆ ಒಂದು ರೂಪಾಯಿ ನನ್ನ ಕೈಗಿತ್ತು ಟೆನ್ಸ್ ಆಗ್ಬೇಡಿ ಅಂದ್ಲು. ಫೋನಿನಲ್ಲಿನ ಸಂಭಾಷಣೆ ಆಕೆಗೆ ಕೇಳಿಸಿದ್ದಿರಬೇಕು. ಆಕೆಯಿತ್ತ ನಾಣ್ಯವನ್ನು ತಗೊಳ್ಳೋವಾಗ ನನಗಾದ ಮುಜುಗರ ಅಷ್ಟಿಷ್ಟಲ್ಲ. ನನ್ನದೆಂಥಾ ಅಸ್ತವ್ಯಸ್ತ ಜೀವನ ಎನ್ನಿಸಿತು.

ಸರಿ ನಾನು ಮೆಜೆಸ್ಟಿಕ್ ತಲುಪಿ ನನ್ನ ಕಲೀಗಳಿಂದ ಒಂದು ರೂಪಾಯಿ ಪಡೆದು ಹಿಂತಿರುಗಿಸುವಷ್ಟರಲ್ಲಿ ಆಕೆ ನಿಲ್ಲದೆ ಅದೆಲ್ಲಾ ಬೇಡ ಬಿಡಿ ಅಂತ ಹೊರಟೇ ಹೋದಳು. ಯಾವುದೋ ಜನ್ಮದ ನನ್ನ ಒಂದು ರೂಪಾಯಿ ಋಣವನ್ನು ಆಕೆ ತೀರಿಸಿ ಹೋದಳೋ ಅಥವಾ ಹೊಸದಾಗಿ ನನ್ನ ಮೇಲೆ ಋಣ ಹೇರಿ ಹೋದಳೋ, ಒಟ್ಟಿನಲ್ಲಿ ನನ್ನ ಮಾನ ಐವತ್ತು ಪೈಸೆಗೆ ಹೋಗೋದು ತಪ್ಪಿತು.

ಅಬ್ಬಬ್ಬಾ!! ಯಾರದ್ದಾದರೂ ಮುಂದೆ ಕೈಚಾಚೋದಿದ್ಯಲ್ಲ ಅದರಷ್ಟು ನಾಚಿಕೆ ತರಿಸುವ ದುಸ್ಥಿತಿ ಮತ್ತೊಂದಿಲ್ಲವೆನ್ನಿ. ಒಟ್ಟಿನಲ್ಲಿ ದುಡ್ಡೇ ದೊಡ್ಡಪ್ಪನಲ್ಲದಿದ್ದರೂ (ದುಡ್ಡು ಚಿಕ್ಕಪ್ಪನಂತೂ ಹೌದು!!) ದುಡ್ಡೆಂಬ ಗಾಲಿಯಿಲ್ಲದೆ ಜೀವನ ನೌಕೆ ಸುಲಭವಾಗಿ ಸಾಗದು..

0 comments: