Tuesday, February 9, 2010

ನನ್ನ ಪುಂಗಿ

ನನ್ನ ಪುಂಗಿ
(ಹೂಂ ಅನ್ನಿಸಿದ್ರೆ ತಲೆ ಆಡ್ಸಿ ಇಲ್ಲಾಂದ್ರೆ ಸ್ಕ್ರೋಲ್ ಡೌನ್ ಮಾಡಿ)


RJ ಉಪೇಂದ್ರ ಜೊತೆ RJ ಪ್ರದೀಪ ಬರ್ತಾರಲ್ಲ 91.1 ಲ್ಲಿ ಬೆಳ್ಗೆ ಬೇಗ ಎದ್ದು ರೇಡಿಯೊ ಕೇಳೋರ್ಗೆಲ್ಲ ಮೈಂಡ್ ಫ್ರೆಷ್ ಮಾಡೋಕೆ, ನಾನೂ ಆಗಾಗ ಈ ಪ್ರೊಗ್ರಾಮ್ ಕೇಳ್ತಾ ನಾಷ್ಟಾ ರೆಡಿ ಮಾಡ್ತಿರ್ತೀನಿ. ಒಂದಿನ ಒಬ್ಬ ಅದ್ಭುತ ಪ್ರೇಮಿ ನಮ್ಮ 7 o'clock RJ's ಗೆ ಫೋನ್ ಜಮಾಯ್ಸಿ ದುಖ್ಖಾ ತೋಡ್ಕೊಂಡಾ-" ನಾಲ್ಕು ವರ್ಷದಿಂದಾ ನಾವಿಬ್ರು ಪ್ರೀತಿಸ್ತಿದೀವಿ, ನಮ್ಮನೆಯವ್ರಿಗೆಲ್ಲಾ ಒಪ್ಗೆ ಇದೆ ಆದ್ರೆ ಹುಡ್ಗಿ ಮನೇಲಿ ಹುಡ್ಗಿಗೆ ಬೇರೆ ಮದ್ವೆ ಮಾಡೋಕೆ ತಯಾರಿ ನಡ್ಸಿದಾರೆ" ಅಂತ. ಸರಿನಪ್ಪ ಒಮ್ಮೆ ಹುಡ್ಗಿ ಜೊತೆ ಮಾತಾಡಿ ನೋಡ್ತೀವಿ ಅಂತ ಆ ಹುಡ್ಗಿ ನಂಬರ್ ಈಸ್ಗೊಂಡ್ರು ನಮ್ ಉಪ್ಪಿ ಮತ್ತೆ ಪ್ರ..ದೀ..ಪಾ. ಹುಡ್ಗಿ ಗೆ ಫೋನ್ ಮಾಡಿ ಕೇಳಿದ್ರೆ "ನಾನು ಹುಡ್ಗಂಗೆ ಮೋಸ ಮಾಡ್ತಿಲ್ಲಾ, ನಾನು ಅವ್ನನ್ನ ತುಂಬಾ ಪ್ರೀತಿಸ್ತೀನಿ ಆದ್ರೆ ಅಪ್ಪ ಸಾಯ್ತೀನಿ ಅಂತಾ ಹೊರ್ಟಿದಾರೆ, ನಾನೇನ್ ಮಾಡ್ಲಿ.." ಆ ಹುಡ್ಗಿ ಹತ್ರ ಅವ್ಳ ಅಪ್ಪನ ನಂಬರ್ ಕಾಡಿ ಕಾಡಿ ತಗೊಂಡು ಹುಡ್ಗಿ ಅಪ್ಪಂಗೆ ಒಂದು ರಿಂಗ್ ಕೊಟ್ರು. ಆಲ್ರೆಡಿ ಮಂಡೆ ಬಿಸಿ ಮಾಡಿಕೊಂಡು ಕೂತ ಅಪ್ಪ ಗರಮ್ ಆಗೇ ಹಲೋ ಅಂತ ಮಾತಿಗಿಳಿದ್ರು. "ಇವೆಲ್ಲಾ ನಮ್ಮನೆ ಸುದ್ದಿ ನಿಮಗ್ಯಾಕ್ರಿ, ಆ ಹುಡ್ಗ ಏನ್ ಮಾಡ್ಕೊಂಡಿದಾನೆ ಅಂತ ಗೊತ್ತಾ ನಿಮ್ಗೆ..?"
"ಇಲ್ವಲ್ಲಾ, ಯಾಕೆ ಏನ್ಮಾಡ್ಕೊಂಡಿದಾನೆ ಅವ್ನು?"
"ಅದ್ನಾ ಅವನ್ನೇ ಹೋಗಿ ಕೇಳಿ.." ಅಂತ call cut ಮಾಡ್ಬಿಟ್ರು. ಪುನಹ ಉಪ್ಪಿ ಜೊತೆ ಪ್ರ..ದೀ..ಪ ಆ ಪ್ರೇಮಿಗೆ ಫೋನಾಯ್ಸಿ ಕೇಳಿದ್ರು,"ಏನಪ್ಪ, ಏನ್ಕಥೆ ನಿಂದು, ಏನ್ಮಾಡ್ಕೊಂಡಿದೀಯಾ?"
ಅದಾಗ್ಲೇ ರೇಡಿಯೋಲಿ ಎಲ್ಲಾ ಸಂಭಾಷಣೆ ಕೇಳ್ಕೊಂಡಿದ್ದ ಅದ್ಭುತ ಪ್ರೇಮಿ" ನೀವೇನ್ರಿ ಅವ್ರನ್ನ ಒಪ್ಪಿಸ್ತೀರಾ ಅಂದ್ಕೊಂಡ್ರೆ, ಎಲ್ಲಾದ್ಕು ಹುಂ ಅಂದ್ಬಿಟ್ಟು ಬಂದಿದೀರಾ,, ಹೌದ್ರಿ ನಾನು ಏನು ಕೆಲ್ಸಾ ಮಾಡ್ಕೊಂಡಿಲ್ಲಾ, ಕೆಲ್ಸಾ ಏನ್ ಮಹಾ ನಾಳೆ ಸಿಕ್ಕೇ ಸಿಗತ್ತೆ.."
ಅದಕ್ಕೆ ಉಪ್ಪಿ"ಲವ್ ಮಾಡೋಕೂ ಸ್ವಲ್ಪ ಅರ್ಹತೆ ಬೇಡ್ವೇನ್ರಿ?" ಅಲ್ಲಿಯೇ ಅಡ್ಡ ಬಾಯಿ ಹಾಕಿದ ಪ್ರೇಮಿ"ಪ್ರೀತ್ಸೋಕೆ ಏನೇನ್ ಅರ್ಹತೆ ಬೇಕ್ರಿ ನಿಮ್ ಲೆಕ್ಕದಲ್ಲಿ ಹಾಗಾದ್ರೆ?" ಅಂತ ಹೇಳಿ ಫೋನ್ ಇಟ್ಬಿಟ್ಟ.

ಇದ್ನೆಲ್ಲಾ ಕೇಳ್ತಾ ನಂಗೆ ಇದೆಂಥಾ ಪ್ರೇಮಿ, ಅದೆಂಥಾ ಲವ್ ಇರ್ಬೇಕು ಇವಂದು,, ಬೇರೆಯವರ ಭಾವನೆಗೆ, ಅಪೇಕ್ಷೆಗೆ ಬೆಲೆ ಕೊಡಲು ಕಲಿಯದ ಇವನೆಂಥಾ ಮನುಷ್ಯ ಅನ್ನಿಸ್ತಪ್ಪ.

ನಾಲ್ಕು ವರ್ಷದಿಂದ ಪ್ರೀತಿಸ್ತಿದ್ರೂ ಒಂದು ಕೆಲಸ ಹುಡುಕಿಕೊಳ್ದೆ ನಾಳೆಗೆ ಮುಂದೂಡ್ತಿರೋ ಮಹಾನ್ ಪ್ರೇಮಿ(ಗಳು), ಅಂಥೊರ್ಗೆಲ್ಲಾ ಬೀಳೋಕೆ, ಬಿದ್ದು ದಿಲ್ ಕೊಡೋಕೆ ತಯಾರಾಗಿ ಹಾರ್ಟನ್ನಾ ಕೈಲೇ ಹಿಡ್ಕೊಂಡು ಓಡಾಡೋ ನಮ್ ಹುಡ್ಗೀರು.. ಯಾಕೆ ಇವ್ರೆಲ್ಲಾ ಹೀಗೆ..? ಒಂದ್ವೇಳೆ ಸ್ವಾತಂತ್ರ್ಯಕಾಗಿ ಈಗ್ಲೂ ಹೋರಾಟ ನಡೀತಿದ್ದಿದ್ದ್ರೆ ನಮ್ ಹುಡುಗ್ರು ಗುಟ್ಕಾ ತಿಂದು ಗೋಡೆಗೆಲ್ಲಾ ಪಿಚುಕಿಸ್ತಾ ಗುಲಾಮ್ ಗಿರಿಗೆ ಸಲಾಮ್ ಹೊಡೀತಾ ಇರ್ತಿದ್ರು ಅನ್ನೋದಂತು ಖಾತ್ರಿ ಮಾತು. ಬಿಡಿ ಬಿಡಿ ಟ್ರ್ಯಾಕಿಗೆ ಬರೋಣಾ.

ಹವ್ಯಕರಲ್ಲಿ ಹೊಸ್ತಾಗಿ ಒಂದು ಗಾದೆ ಮಾತು ಹುಟ್ಕಂಜು "ಅಪ್ಪ ಅಮ್ಮ ಮದ್ವೆ ಮಾಡದಾರೆ ಡಾಕ್ಟ್ರು ಇಂಜಿನೀಯರ್ನೇ ಬೇಕು, ಓಡಿ ಹೋಪದಾರೆ ಗಾರೆಯವ್ನೇ ಸಾಕು" ಹೇಳಿ.

ಹುಡ್ಗೀರು ನಾನು ಅವ್ನಿಗೆ ಮೋಸ ಮಾಡ್ತಿಲ್ಲಾ, ಮನೇಲಿ ಬ್ಲಾಕ್ ಮೇಲ್ ಅಂತಾ ರಾಗ ತೆಗ್ಯೋದು, ಹುಡುಗ್ರು ತಾನು ಯಾರ್ ಮಾತು ಕೇಳ್ತೀನೋ ಬಿಡ್ತೀನೋ ಅದ್ರೆ ತನ್ನ ಮಾತು ಹುಡ್ಗಿ ತಂದೆ ತಾಯಿ ಪ್ರಶ್ನಿಸದೆ ಒಪ್ಪಿಬಿಡ್ಬೇಕು. ನಿಮ್ ಮಗ್ಳನ್ನ ಮದ್ವೆ ಆಗ್ತೀನಿ ಅಂದ್ರೆ ತಕ್ಷಣ ಕೈ ಕಾಲು ತೊಳೆದು ಮಗ್ಳನ್ನ ಮದ್ವೆ ಮಾಡಿ ಕೊಟ್ಬಿಡ್ಬೇಕು.. ಅದು ನಾಯಿ ಮರಿ ನೋಡಿ ಕೇಳಿದ್ಕೂಡ್ಲೆ without any objection ಕೊಟ್ಬಿಡೋಕೆ..!!

ಅರರೆ ಜಾತಿ ಕೂಡಾ ಮದ್ವೆ ವಿಷ್ಯದಲ್ಲಿ ಭಾರಿ ಮೇನ್ ರೋಲ್ ತಗೋತದೆ ನೋಡ್ರಿ.. ನಮ್ಮೂರು ಕುಮಟಾ. ಅಲ್ಲಿ ಹರಿಕಂತರು ಅನ್ನೋ ಒಂದು ಜಾತಿ ಇದೆ. ಸಮಾಜದಲ್ಲಿ ಇವ್ರು ನಾಯ್ಕರಿಗಿಂತ ಕೆಳ್ಗೆ ಅಂತ ಗುರುತಿಸಲ್ಪಡ್ತಾರೆ. ಮೊನ್ನೆ ಹರ್ಕಂತ್ರ(ಹರಿಕಾಂತರ) ಹುಡ್ಗಿ ನಾಯ್ಕರ ಹುಡ್ಗನ್ ಜೊತೆ ಓಡಿ ಹೋಗಿ ಮದ್ವೆ ಆದ್ಲು. ಹರಿಕಾಂತರ ಮತ್ತು ನಾಯ್ಕರ ಸಮಾಜವೆರಡೂ ಇವ್ರನ್ನ ದೂರ ಇಟ್ಟಿದೆ. ಕೇವಲ ಬ್ರಾಹ್ಮಣರಷ್ಟೇ(I mean ಮೇಲ್ವರ್ಗದವ್ರು) ಜಾತೀಯತೆಯ ಸಿಂಬಾಲ್ ಆಗಿದ್ದ ಒಂದು ಕಾಲ ಜಾರಿ ಈಗ ಎಲ್ಲಾ ಜಾತಿಯವರೂ ತಮ್ಮ ತಮ್ಮ ಜಾತಿಯ ಪಟ್ಟನ್ನ ಬಿಗಿಗೊಳಿಸಿದ್ದಾರೆ. ಲಿಂಗಾಯಿತರಲ್ಲಿ ಐದು ಒಳ ಪಂಗಡವಂತೆ, ಬಹಳಷ್ಟು ಮಂದಿ ಈ ಐದು ಒಳ ಪಂಗಡದವರೊಂದಿಗೂ ಸಂಬಂಧ ಬೆಳೆಸೊಲ್ವಂತೆ ನೋಡಿ..

ನನ್ನದೊಂದು ಸಂದೇಹ ಬುದ್ಧ, ಮಹಾವೀರ, ಬಸವಣ್ಣನವರೆಲ್ಲಾ ಯಾಕೆ ಹೊಸಾ ಹೊಸಾ ಜಾತಿ ಅಂತ ಹುಟ್ಟು ಹಾಕಿದ್ರೋ ಏನೊ, ಹುಟ್ಟಿದ ಜಾತೀಲೇ ಸಮಾಜ ಸುಧಾರಿಸಿದ್ದಿದ್ರೆ ಮತ್ತೂ ಒಂದಿಷ್ಟು ಹೊಸ ಜಾತಿ ಹುಟ್ಟಿ ಗಲಾಟೆ ಆಗೋದಾದ್ರು ತಪ್ತಿತ್ತೇನೋ!! ಹಳೆ ಮನೆ ಒಡೆದು ಆ ಜಾಗದಲ್ಲಿ ಹೊಸ ಮನೆ ಕಟ್ಟೋದ್ಕಿಂತಾ ಬೇರೆ ಖಾಲಿ ಜಾಗದಲ್ಲಿ ಹೊಸ ಮನೆ ಕಟ್ಟೋದು ಸುಲಭ ಅನ್ನಿಸಿರ್ಬಹುದಾ ಅಥವಾ ಅವ್ರಿಗೆ ಮುಂದೆ ಹೀಗಾಗ್ಬಹುದು ಅನ್ನೋ ಕಲ್ಪನೆ ಇರ್ಲಿಕ್ಕಿಲ್ಲಾ.

ಒಟ್ನಲ್ಲಿ ಜಾತಿ ವಿಷ್ಯಾ ಅಂತು ಅವರವ್ರಿಗೇ ಬಿಟ್ಟಿದ್ದು, ಆದ್ರೆ ನಿಮ್ಮ ನಂಬಿದವ್ರ ಸಾಲಲ್ಲಿ ಅಪ್ಪ ಅಮ್ಮ ಕೂಡ ನಿಂತಿದಾರೆ ಅನ್ನೋದ್ನ ಮರೀಬೇಡಿ. ಆಪ್ಪ ಅಮ್ಮ ಒಪ್ಪುವಂಥ ಹುಡ್ಗಾ/ಹುಡ್ಗೀನಾ ಪ್ರೀತ್ಸಿ, ಅಪ್ಪ ಅಮ್ಮನ್ನ ಒಪ್ಸಿ ಮದ್ವೆ ಆಗಿ. ಓಡಿ ಹೋಗಿ ಮದ್ವೆ ಆಗೋದು ಎನ್ ಛಂದಾ ಹೇಳಿ.
Anyways All The Best ಕಣ್ರಿ ಪ್ರೀತಿಸ್ತಿರೋರ್ಗೆ ಮತ್ತೆ ಪ್ರೀತ್ಸೋಕೆ ಹೊರಟೋರ್ಗೆ.

0 comments: