Monday, September 6, 2010

ಶಿಕ್ಷಕರ ದಿನಾಚರಣೆಯ ಶುಭಾಷಯಗಳು

ಗುರು ಗೋವಿಂದ್ ದೋಊ ಖಡೈ ಖಾಕೆ ಲಾಗೂ ಪಾಯ್
ಬಲಹಾರೀ ಗುರು ಅಪನೆ ಗೋವಿಂದ್ ದಿಯೆ ಬತಾಯ್

(ಗುರು ಮತ್ತು ಗೋವಿಂದರಿಬ್ಬರೂ (ಎದುರಲ್ಲಿ) ನಿಂತಿದ್ದರೆ ಯಾರ ಚರಣಕ್ಕೆ(ಮೊದಲು) ಎರಗಲಿ,
ಗೋವಿಂದನಿರುವನ್ನು ಗುರುವೆ ಅಲ್ಲವೇ ತೋರಿಸಿದ್ದು..)
ನಾನು 7ನೇ ತರಗತಿಯಲ್ಲಿ ಓದಿದ ದೋಹೆ ಇದು. ತುಳಸಿದಾಸರದ್ದು ಎಂಬ ನೆನಪು..

ಹಿಂದೊಂದು ಕಾಲದಲ್ಲಿ ಗುರುವೆಂದರೆ ಸರ್ವಸ್ವ ಎಂದು ನಂಬಿ ಪೂಜಿಸಿಕೊಳ್ಳುತ್ತಿದ್ದ ಗುರು ಈಗ ಎಲ್ಲರ ಬಾಯಲ್ಲೂ ಮಾಸ್ತರನಾಗಿ (ಕೇವಲ) ಆಗಿದ್ದನೆ. ತಿಂಗಳ ಸಂಬಳಕ್ಕೆ ಗಿಂಬಳದ ರುಚಿಯರಿಯದ ಮಾಸ್ತರ್ರು ಕಾಯುವುದು ಧಗಿಸುವ ಬಿಸಿಲಲ್ಲಿ ಸಮುದ್ರ ತೀರದಲ್ಲಿ ನಿಂತು ಸಾಗರದ ಸೊಬಗನ್ನು ಸವಿಯಲಾಗದೆ ಕಾಲ್ಕೆಳಗಿನ ಮಳಲ(ಹೊಯ್ಗೆ) ಝಳಕ್ಕೆ ಥಕಧಿಮಿಸುವಂತಿರುತ್ತದೆ. ಒಮ್ಮೊಮ್ಮೆಯಂತೂ ೫-೬ ತಿಂಗಳು ಸಂಬಳವೆ ಆಗೊಲ್ಲ ಇವರಿಗೆ.. ಇದರೊಂದಿಗೆ "ಹೋಯ್ ಮಾಸ್ತರ್ರೋ" ಎಂದು ಪ್ರೀತಿಯಿಂದ ಕರೆದಂತೆ ಕಂಡರೂ ಹಿಂಬದಿಯಿಂದ "ಅವ ಎಂತಾ ಮಾಸ್ತರ್ನೋ" ಎಂದು ಹೀಗಳೆವ ಪಾಲಕರು!!

ಇವರು ವಾರ್ಷಿಕ ಪರೀಕ್ಷೆಯ ಪೇಪರ್ರು ತಿದ್ದುವುದು ಹೇಗೆ ಗೊತ್ತಾ?? ರೆಡ್ ಇಂಕ್ ಜೊತೆ ಒಂದು ಬ್ಲೂ ಇಂಕ್ ಪೆನ್ ಇಟ್ಕೊಂಡು!ತರಗತಿಯ ೪-೫ ಪೇಪರ್ರನ್ನುಳಿದು ಬಾಕಿ ಎಲ್ಲರ ಪೇಪರ್ರನ್ನು ಮಾಸ್ತರರೇ ಬರೆದು ರೈಟ್ ಹಾಕಿ ಮಾರ್ಕ್ಸ್ ಕೊಟ್ಟು ಪಾಸ್ ಮಾಡುವುದು ವಾಡಿಕೆಯಾಗಿಬಿಟ್ಟಿದೆ..ಕಲಿಸುವಾತ ಕಲಿಯುವಾತ ತೇರ್ಗಡೆಯಾಗುವುದು ಎಲ್ಲವೂ ಮಾಸ್ತರರೇ,, ಆದರೆ ಮಕ್ಕಳ ಹೆಸರಲ್ಲಿ.

ನನ್ನ ತಂದೆ ತಾಯಿ ಇಬ್ಬರೂ ಶಿಕ್ಷಕ/ಕಿ ಯರೆ. ಅವರಿಂದ ಕಲಿತದ್ದು ನಾನು ಬಹಳ ಉಂಟು. ನನ್ನ ಡಿಗ್ರೀ ವರೆಗಿನ ವಿದ್ಯಾಭ್ಯಾಸವೆಲ್ಲ ಘಟ್ಟದ ಮೇಲೆಯೇ ಆದದ್ದು(ಮಂಚೀಕೇರಿ, ಸಿದ್ದಾಪುರ). ಆಗಂತೂ ಘಟ್ಟದ ಕೆಳಗಿನವರು(ಕುಮಟ, ಕಾರವಾರ, ಭಟ್ಕಳ, ಅಂಕೋಲಾ, ಹೊನ್ನಾವರದವರು) ಶಿಕ್ಷಕರಾಗಿ ಘಟ್ಟದ ಮೇಲಿನ(ಶಿರಸಿ,ಸಿದ್ದಾಪುರ,ಯಲ್ಲಾಪುರ,ಮುಂಡಗೋಡು,ಹಳಿಯಾಳ, ಸುಪ) ಊರುಗಳಿಗೆ ಹೋಗುವುದು ಅತಿಯೇ ಇತ್ತು. ಘಟ್ಟದ ಮೇಲಿನ ತೋಟಸ್ತ ಜನರಿಗೆ ಶಿಕ್ಷಕ ವೃತ್ತಿ ಎಂದರೆ ಆಗ ಬಹಳ ತಾತ್ಸಾರ.
"ಮಾಸ್ತರಂಗೆ ತೋಟ ಗೀಟ ಇದ್ದಡ? ಉಣ್ಣಲ್ಲೆ ತಿನ್ನಲ್ಲೆ ಸಾಲ್ತಡ??",, ಬಿಸಿ ಊಟದ ಕಾರ್ಯಕ್ರಮ ಶುರು ಆದಾಗಿನಿಂದ "ನಿನ್ನಪ್ಪ ಮಾಸ್ತರ್ನಲೆ,, ಬಿಸಿ ಊಟದ ಅಕ್ಕಿ ಮನೆಗೂ ಬತ್ತಾ??",, "ಅಕ್ಕೋರು ಮಾಸ್ತರ್ರಿಗೆ ಆರಾಮು, ಬಿಸಿ ಊಟ ಸಿಗ್ತು, ಅಕ್ಕಿ ಗಿಕ್ಕಿ ತರ ಹೇಳೇ ಇಲ್ಲೆ." ಎಂದೆಲ್ಲ ಕೇವಲವಾಗಿ ಮಾತನಾಡಿದಾಗ ನಮಗೆ ಆಗುತ್ತಿದ್ದ ನೋವು, ಬೇಸರ ಹೇಳ ತೀರದು. ಈಗ ಅಪ್ಪ ಆಯಿಗೇ ಗುರುತು ಸಿಗದಂತೆ ಬೆಳೆದ ಡಾಕ್ಟರ್, ಇಂಜಿನೀಯರ್, IPS, IAS ಆಫೀಸರ್ ಗಳು, ಜವಾನ ಮತ್ತು ಲೆಕ್ಚರರ್, ಶಾಲೆ ಮಾಸ್ತರ್ ಗಳು ನಮ್ಮ ಮನೆಗೆ ಬಂದು ತಮ್ಮ ವಿದ್ಯಾರ್ಥಿಗಳೆಂದು
ಪರಿಚಯ ಹೇಳಿಕೊಂಡು ಕಾಲಿಗೆರಗಿದಾಗ ಆಗ ಹೀಯಾಳಿಸಿಕೊಂಡ ನೋವು ಚೂರು ಮನಸ್ಸಿಗೆ ಬರಲ್ಲ. ಇದಕ್ಕಿಂತಲೂ ದೊಡ್ಡ ಕೊಡುಗೆಯನ್ನ ಶಿಕ್ಷಕರಾಗಿ ಅವರು ಪಡೆಯಲು ಸಾಧ್ಯವಿಲ್ಲ ಎನ್ನಿಸುತ್ತದೆ.. ಮೊದಲ ಗುರುವಾದ ಆಯಿಗೆ, ಅಪ್ಪನಿಗೆ ಮತ್ತು ನನ್ನ ಕನ್ನಡ ಶಾಲೆಯ ಮತ್ತು ಹೈಸ್ಕೂಲಿನ ಎಲ್ಲಾ ಸರ್ ಮತ್ತು ಬಾಯರ್ರಿಗೆ(ಆಗ ನಾವು ಬಾಯರ್ರೆ ಅಂತಲೇ ಕರೆಯುತ್ತಿದ್ದಿದ್ದು.), ಶಿಕ್ಷಕರ ದಿನಾಚರಣೆಯ ಶುಭಾಷಯಗಳು (Belated Wishes).

ಕುಮಟೆಯ ಬಾಳಿಗಾ ಕಾಲೇಜಿನ ನನ್ನ ನೆಚ್ಚಿನ ಡಾ!ಮಹೇಶ್ ಅಡಕೋಳಿಯವರಿಗೆ, ಸಿದ್ದಾಪುರದ 65ರ ಇಳಿವಯಸ್ಸಲ್ಲೂ ಬೆಳಿಗ್ಗೆ ೪ಗಂಟೆಗೇ ಎದ್ದು ಓದಲು ಕುಳ್ಳುವ ನನ್ನ ನೆಚ್ಚಿನ ಲೇಖಕರೂ ಆದ ಆರ್.ಪಿ.ಹೆಗಡೆಯವರಿಗೆ, ಧಾರವಾಡ ವಿಶ್ವ ವಿದ್ಯಾಲಯದ ಅರ್ಥ ಶಾಸ್ತ್ರ ವಿಭಾಗದ ಪುಷ್ಪಾ ಸವದತ್ತಿ ಹಾಗೂ ಬಾಗಲಕೋಟಿ ಸರ್ ಅವರಿಗೂ ಮತ್ತು ನನ್ನ ಜೀವನದ ಪುಸ್ತಕದಲ್ಲಿ ಸುಂದರ ಪುಟಗಳಾಗಿ ಬಂದ ನನ್ನ ಎಲ್ಲಾ ಶಿಕ್ಷಕರಿಗೂ ಶಿಕ್ಷಕ ದಿನಾಚರಣೆಯ ಶುಭಾಷಯಗಳು..

ಮತ್ತು ಮಕ್ಕಳ ತಂದೆ ತಾಯಿಗಳಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ನಮ್ಮ ಹುದ್ದೆ ಎಷ್ಟೇ ಶ್ರೇಷ್ಟವಿರಲಿ, ನಾವು ಎಷ್ಟೇ ಮೇಲ್ಮಟ್ಟದಲ್ಲಿರಲಿ ಶಿಕ್ಷಕ/ಕಿಯರನ್ನು ಅವಹೇಳನ ಮಾಡದೆ ಅವರನ್ನು ಗೌರವಿಸುವ ಸೌಜನ್ಯತೆ ನಮ್ಮಲ್ಲಿರಲಿ,, ಯಾಕೆಂದರೆ ನಮ್ಮ ಭಾವನೆ ವಿಚಾರಗಳು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆಯಲ್ಲವೇ! ಮಕ್ಕಳಿಗೆ ಎಲ್ಲರನ್ನು ಗೌರವಿಸುವ ಮತ್ತು ಪ್ರೀತಿಸುವ ವಿನಯವಂತಿಕೆ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ಯಾಕೆಂದರೆ ಅವಿನಯದಿಂದ ವಿದ್ಯೆಯು ಶೋಭಿಸಲ್ಪಡುವುದಿಲ್ಲ..

ಈ ಕೆಳಗಿನ ಸಾಲುಗಳು ಮೊದಲೇ ಪೋಸ್ಟ್ ಮಾಡಿದ್ದಾದರೂ ಶಿಕ್ಷಕರ ನೆನಪಲ್ಲಿ ಇನ್ನೊಮ್ಮೆ ತಮ್ಮ ಮುಂದಿಡುತ್ತಿದ್ದೇನೆ.ನಮ್ಮ ಅಕ್ಕೋರು ಮಾಸ್ತರ್ರಿಗೆ...
(ಪ್ರೀತಿಯಿಂದ)

ಹದಿನೇಳ ಏಳಲೆಗೇ ನಿಂತ ಮಗ್ಗಿಯ ಗಾಡಿ,
ಮೆಲಕ್ಕೇರದ ಅಣ್ಣನು ಮಾಡಿದ ಗಾಳಿಪಟ,
ಮುಂದೆ ಸಾಗದ ನನ್ನ ನವಿಲು
ನಮ್ಮ ಮಾಸ್ತರ್ರರ ಬೆತ್ತದೇಟಿಗೂ ಬಗ್ಗದೆ
ಹರಿದ ಖಾಕಿ ಚದ್ದಿಯನ್ನಷ್ಟೆ
ಒದ್ದೆ ಮಾಡುತ್ತಿದ್ದರೂ
ಅವರ ಬಾಯಿಪಾಠದ ಕಾಟ ತಪ್ಪುತ್ತಿರಲಿಲ್ಲ.

ಪ್ರತಿ ವರ್ಷವೂ
ನಾ ಕಂಡ ಮಳೆಗಾಲ, ನಾನು ಮಂತ್ರಿ ಆದರೆ,
ಪ್ರವಾಸ ಕಥನ, ಹಿಡಿಯ ಆತ್ಮ ಚರಿತ್ರೆ
ನನ್ನ ಗುರಿ.. ಇಂತಹ ನಿಬಂಧಗಳನ್ನೆ ಬರೆದೂ ಬರೆದು
ನಾವು ದಂಗಾದರೂ ನಮ್ಮ ಶರಾ ಮಾತ್ರ
ಆರಕ್ಕೇರಲಿಲ್ಲ,,,,, ಮೂರಕ್ಕೂ ಏರಲಿಲ್ಲ,
ಅವರೂ ಹೆದರದೆ ಅಪ್ಪನನ್ನೇ ಕರೆಸಿ ಬಿಸಿ ಹಚ್ಚಿ
ಗೆದ್ದಂತೆ ನಗುತ್ತಿದ್ದರು.

ದಿನಚರಿ ಪುಸ್ತಕದಲ್ಲಷ್ಟೆ
ದಿನಾಲು ಕಸಗುಡಿಸುತ್ತೇವೆಂದು ಗೊತ್ತಿದ್ದರೂ
ಒಂದಿನವೂ ಬಿಡದೆ ದಿನಚರಿ ಓದಿ
ಸಹಿ ಹಾಕುವ ಅಕ್ಕೋರಿಗೂ ಗೊತ್ತಿತ್ತು
ಶುಚಿ ಎಂದರೆ ನಮಗೆ ಅಲರ್ಜಿ ಎಂದು.
ಹಾಗಂತ ಪ್ರರ್ಥನೆಯಾದ ಮೇಲೆ ಸತ್ಯವೇ ದೇವರು,
ತಾಯಿಗಿಂತ..; ಕೈ ಕೆಸರಾದರೆ..ಅಂತೆಲ್ಲಾ ಒದರಿಸಿ
ಸಿಂಗನ ಉಗುರು, ಹಳದಿ ಹಲ್ಲನ್ನು ನೋಡಿ
ಕಿವಿ ಹಿಂಡುವುದನ್ನೆಂದೂ ಮರೆಯುತ್ತಿರಲಿಲ್ಲ.

ಪರೀಕ್ಷೆಯ ಮಾರ್ಕ್ಸು ಬಂದಾಗಲೆಲ್ಲ
ನಮ್ಮದು ಒಂದೇ ಗೋಳು
ಅಕ್ಕೋರು ಮಾಸ್ತರ್ರು ಸರಿ ಪಾಠ ಮಾಡಲ್ಲ,,
ಹೀಗೆ ಆಗುತ್ತೆ ಅಂತ ನಮ್ಮ ಅಕ್ಕೋರು ಮಾಸ್ತರ್ರಿಗೂ ಗೊತ್ತು!!
ಕೋಣಗಳ ಮುಂದೆ ಕಿನ್ನರಿ ಊದಿ
ರೂಢಿ ಆದ ಕಿನ್ನರ ಜೊಗಿಯ ವಂಶಸ್ಥರಂತೆ
ಕಾಯಕದಲ್ಲಿ ಕೈಲಾಸ ಕಾಣುವ ಸಹನಾ ಜೀವಿಗಳು
ನಮ್ಮ ಅಕ್ಕೋರು ಮಾಸ್ತರ್ರು

ಗೊಂಡೆಯೋ, ಗುಲಾಬಿ, ದಾಸಾಳವೋ
ತಂದ ಹೂವೆಲ್ಲ ಪ್ರೀತಿಯಿಂದ
ಅಕ್ಕೊರ ಮುಡಿಗೆ
ಬೆಟ್ಟದ ನೆಲ್ಲಿಕಾಯೆಲ್ಲ
ನಮ್ಮೊಲುಮೆಯ ಮಾಸ್ತರ್ರ ಪಾಲಿಗೆ.

ಅಕ್ಕೋರು ಮಾಸ್ತರ್ರ ಮೇಲಿನ ಭಯ, ಭಕ್ತಿ, ಪ್ರೀತಿ
ಮತ್ಯಾವ ಸರ್, ಮೇಡಮ್
ಯಾವ ಲೆಕ್ಚರ್ರರ ಮೇಲೂ(ಲೆಕ್ಚರಿಕೆಯ ಮೇಲೂ)
ಬಂದಿಲ್ಲ.
ಜೀವನದಲ್ಲೊಮ್ಮೆ ಕಾಣುವ ಸರ್ವಜ್ಞರೇ
ನಮ್ಮ ಅಕ್ಕೋರು ಮಾಸ್ತರ್ರು ಎಂದರೂ ತಪ್ಪಿಲ್ಲ

(ಏಕೆಂದರೆ ಕಡೆಗೆಲ್ಲಾ ನಮ್ಮನ್ನುಳಿದು ನಮಗೆ ಇನ್ಯಾರೂ ಸರ್ವಜ್ಞರಂತೆ ಕಾಣಲ್ಲ)

18 comments:

ಸೀತಾರಾಮ. ಕೆ. / SITARAM.K said...

ಕವನ ಮತ್ತು ಬರಹ ಚೆನ್ನಾಗಿದೆ.
ತುಂಬಾ ಆಪ್ತವಾಗಿ ಹೇಳಿದ್ದಿರಾ...

ತೇಜಸ್ವಿನಿ ಹೆಗಡೆ said...

ಸಾಗರಿ,

ನನ್ನ ತಂದೆಯವರೂ ಶಿಕ್ಷಕ ವೃತ್ತಿಯಲ್ಲಿರುವವರೇ. ಮಂಗಳೂರಿನ ಕೆನರಾ ಡಿಗ್ರಿ ಕಾಲೇಜಿನಲ್ಲಿ ಸಂಸ್ಕೃತ ಪ್ರೊಫೆಸರ್ ಅವರು. ಹಾಗಾಗಿ ಈ ವೃತ್ತಿಯ ಮಹತ್ವ, ಸಾಧಕ/ಬಾಧಕ ಎಲ್ಲವೂ ನನಗೂ ಚೆನ್ನಾಗಿ ಗೊತ್ತು. ಪ್ರಾಮಾಣಿಕ, ನಿಷ್ಠ, ಉತ್ತಮ ಗುರುಗಳ ಪ್ರತಿ ಗೌರವ, ಆದರ, ಆತ್ಮೀಯತೆ ತನ್ನಿಂದ ತಾನೇ ಹುಟ್ಟಿಕೊಳ್ಳುತ್ತದೆ ಶಿಷ್ಯರಲ್ಲಿ. ಅದನ್ನು ನಾನೇ ಸ್ವತಃ ಕಂಡು ನೋಡಿದ್ದೇನೆ. ನಾವು ಗೌರವದಿಂದ ಕಾಣುವ ವ್ಯಕ್ತಿಗಳನ್ನೆಲ್ಲಾ ಮಕ್ಕಳೂ ಗೌರವಿಸುತ್ತಾರೆ. ಉತ್ತಮ ಲೇಖನ. ಇಷ್ಟವಾಯಿತು. ಹಿಂದಿ ದೋಹ ನಾನೂ ಕಲಿತಿದ್ದೆ. ಚೆನ್ನಾಗಿ ನೆನಪಿದೆ. ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳು.

(ಶ್ರೀ ಅಡಕೋಳಿಯವರು ನಮ್ಮ ತಂದೆಯವರಿಗೂ ಬಹು ಪರಿಚಿತ :) )

sunaath said...

ನನ್ನ ಜೀವನದಲ್ಲಿ ಇರಬಹುದಾದ ಉತ್ತಮ ಅಂಶಗಳನ್ನು ಪ್ರೇರೇಪಿಸಿದವರು ನನ್ನ ಗುರುಗಳು. ನಿಮ್ಮ ಲೇಖನವು ನನಗೆ ಮತ್ತೊಮ್ಮೆ ಅವರ ನೆನಪನ್ನು ತಂದಿತು. ಧನ್ಯವಾದಗಳು.

ದಿನಕರ ಮೊಗೇರ said...

ಸಾಗರಿ ಮೇಡಮ್,
ನೀವು ಹೇಳಿದ ಹಾಗೆ ಇನ್ನೂ ಇದೆ ಕೆಲವು ಕಡೆ.... ನನ್ನ ಕೆಲವು ಸ್ನೇಹಿತರ ಅಪ್ಪ ಅಮ್ಮಂದಿರು ಶಿಕ್ಶಕರಿದ್ದರೂ ಅವರಿಗೆ ಪರೀಕ್ಶೆಯ ಪ್ರಶ್ನೆ ಪತ್ರಿಕೆ ಅವರಿಗೆ ದೊರೆಯುತ್ತಿರಲಿಲ್ಲ..... ಅವರ ವ್ರತ್ತಿಗೊಂದು ಸಲಾಮ್..... ಚೆನ್ನಾಗಿ ಬರೆದಿದ್ದಿರಿ ....

ಮನಮುಕ್ತಾ said...

ಚೆ೦ದದ ಬರಹ..
ನನ್ನ ಗುರುಗಳಿಗೆಲ್ಲಾ ವ೦ದನೆಗಳು.

Badarinath Palavalli said...

thanks for visiting my blog.
my mobile wouldn't support kannada fonts. hence, i will read ur post in a pc and comment back.

ಪ್ರವೀಣ್ ಭಟ್ said...

guru brahma guru vishnu. guru devo maheshwara.. guru sakasht parabrahma tasmai shree guruve namaha..

varna matram kalisidaatam guru..

chennag baradde.. badukinalli tili helida ellaru guruve...

Pravi

Shiv said...

ಸಾಗರಿಯವರೇ,

ಘಟ್ಟದ ಭೌಗೋಳದ ಪರಿಚಯಕ್ಕೆ ವಂದನೆಗಳು.
ಪಶ್ಚಿಮ ಘಟ್ಟದ ಬಗ್ಗೆ ಹೇಳುತ್ತಿರುವುದೇ?

ಅಕ್ಕೋರು ಮಾಸ್ತರ ಕವನ ತುಂಬಾ ಚೆನ್ನಾಗಿದೆ.
ಹೌದಲ್ವಾ..ಅದೆಷ್ಟು ನಿಬಂಧನೆಗಳನ್ನು ಬರೆದು ಬರೆದು ಪೇರಿಸಿಟ್ಟಿದ್ದು ಆ ದಿನಗಳಲ್ಲಿ..

ನಿಮ್ಮ ಪೋಷಕರಿಗೂ ಮತ್ತು ಎಲ್ಲಾ ಗುರುಗಳಿಗೂ ದಿನಾಚರಣೆಯ ಶುಭಾಶಯಗಳು

shridhar said...

ಆಪ್ತವಾದ ಬರಹ ..
ನಿಮ್ಮ ಗುರುವಂದನೆ ಚೆನ್ನಾಗಿದೆ ...

Subrahmanya said...

ಓಹ್ !. ತುಂಬ ಖುಷಿಯಾಯ್ತು ಇಂತಹ ಓಂದು ದೋಹೆಯನ್ನು ಓದಿ. ಬಹಳ ಚೆನ್ನಾಗಿದೆ

ಮನಸಿನಮನೆಯವನು said...

ದೋಹ ಸೊಗಸಾಗಿದೆ..
"ಆಚಾರ್ಯ ದೇವೋಭವ.."

Ashok.V.Shetty, Kodlady said...

ಸಾಗರಿ ಅವ್ರೆ...

ತುಂಬಾ ಚೆನ್ನಾಗಿದೆ ನಿಮ್ಮ ಬರಹ ಹಾಗೂ ಕವನ. ನಿಮ್ಮ ಲೇಖನ ನನ್ನ ಗುರುಗಳನ್ನೆಲ್ಲಾ ನೆನಪಿಸಿತು. ಧನ್ಯವಾದಗಳು....

http://ashokkodlady.blogspot.com/

ಸಾಗರದಾಚೆಯ ಇಂಚರ said...

saagari

tadavaago oduttiddene, kshamisi

olleya baraha

Kalavatimadhisudan said...

ಸಾಗರಿಯವರೇ ನಿಮ್ಮ ಲೇಖನ ಅಂತಃಕರಣ ಕಲಕುವಂತಿದೆ.ಒಬ್ಬ ಶಿಷ್ಯ ಬಂದು ನಿಮ್ಮಿಂದ ಈಮಟ್ಟಕ್ಕೆ ಬಂದಿದ್ದೇನೆಂದಾಗ
ಆಗುವ ಸಂಭ್ರಮ,ಯಾವ ಪದ್ಮಶ್ರೀ ಪ್ರಶಸ್ತಿಗೂ ಸಿಗಲಾರದ್ದು.ಅಭಿನಂದನೆಗಳು. ನಮ್ಮ ಬ್ಲಾಗ್ ಗು ಭೇಟಿ ನೀಡುತ್ತಿರಿ

Kalavatimadhisudan said...

ಸಾಗರಿಯವರೇ ನಿಮ್ಮ ಲೇಖನ ಅಂತಃಕರಣ ಕಲಕುವಂತಿದೆ.ಒಬ್ಬ ಶಿಷ್ಯ ಬಂದು ನಿಮ್ಮಿಂದ ಈಮಟ್ಟಕ್ಕೆ ಬಂದಿದ್ದೇನೆಂದಾಗ
ಆಗುವ ಸಂಭ್ರಮ,ಯಾವ ಪದ್ಮಶ್ರೀ ಪ್ರಶಸ್ತಿಗೂ ಸಿಗಲಾರದ್ದು.ಅಭಿನಂದನೆಗಳು. ನಮ್ಮ ಬ್ಲಾಗ್ ಗು ಭೇಟಿ ನೀಡುತ್ತಿರಿ

ಚಿನ್ಮಯ ಭಟ್ said...

mastaag bardidira ...danyavada

SATISH N GOWDA said...

ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಬೇಟಿ ........
ಸುಂದರ ಕವನಗಳು ,ಸುಮಧುರ ಸಾಲುಗಳು , ಅದ್ಭುತ ಕಲ್ಪನೆ ..... ಸುಂದರವಾಗಿದೆ ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ .... ನಿಮಗೆ ನನ್ನವಳಲೋಕಕ್ಕೆ ಆತ್ಮಿಯ ಸ್ವಾಗತ


SATISH N GOWDA

http://nannavalaloka.blogspot.com/

ಸಾಗರಿ.. said...

ಸೀತಾರಾಮ್ ಸರ್,
ತೇಜಸ್ವಿನಿ ಅವರೆ,
ಕಾಕಾ,
ದಿನಕರ್ ಅವರೇ,
ಮನಮುಕ್ತಾ ಅವರೇ,
ಬದ್ರಿನಾಥ್ ಅವರೆ,
ಪ್ರವೀಣ್ ಅವರೇ,
ಶಿವ್ ಅವರೆ,
ಶ್ರೀಧರ್ ಅವರೇ,
ಶಂಭುಲಿಂಗ ಅವರೇ,
ಕತ್ತಲೆ ಮನೆಯವರೇ,
ಅಶೋಕ್ ಅವರೇ,
ಗುರು ಅವರೇ,
ಕಲರವ ಅವರೇ,
ಚಿನ್ಮಯ್ ಅವರೇ,
ಸತೀಶ್ ಅವರೇ,

ತಮಗೆಲ್ಲರಿಗೂ ಪ್ರೀತಿಯ ಅಭಿಪ್ರಾಯಗಳಿಗೆ ಧನ್ಯವಾದಗಳು. ತಡವಾಗಿ ತಮ್ಮ ಪ್ರತಿಕ್ರೀಯೆಗಳಿಗೆ ಸ್ಪಂದಿಸುತ್ತಿದ್ದೇನೆ, ದಯವಿಟ್ಟು ಕ್ಷಮಿಸಿ(ಪ್ರತಿ ಸಲವೂ ಒಂದೇ ಹಾಡು ಆಯಿತು ನನ್ನದು).
ಕಲರವ, ಚಿನ್ಮಯ್, ಸತೀಶ್, ಶಿವ್ ತಮಗೆಲ್ಲರಿಗೂ ನನ್ನ ಬ್ಲಾಗಿಗೆ ಸ್ವಾಗತ. ತಮ್ಮ ಬ್ಲಾಗ್ ಗಳಿಗೂ ಆದಷ್ಟು ಬೇಗ ಭೇಟಿ ನೀಡುವ ಆಸೆ ಇದೆ,,,, ಆದರೆ ನನಗೆ ಇನ್ನೂ ಟೈಮ್ ಬೇಕು.. ಅನ್ಯಥಾ ಭಾವಿಸದಿರಿ.
ತೇಜಸ್ವಿನಿ ಅವರೇ, ಅಡಕೋಳಿ ಸರ್ ತಮ್ಮ ತಂದೆಯವರಿಗೆ ಪರಿಚಯವೇ ಹಾಗಿದ್ದರೇ?? ತಮ್ಮೊಂದಿಗಿನ ನನ್ನ ಆತ್ಮೀಯತೆ ಹೆಚ್ಚಿದಂತೆ ಅನ್ನಿಸುತ್ತಿದೆ ನನಗೆ. ಪ್ರಾಮಾಣಿಕ, ನಿಷ್ಠ ಗುರುಗಳಿಗೆ ಅವರದ್ದೇ ಆದ ಸ್ಥಾನ ಮಾನವಿದೆ.. ಆದರೂ ಎಲ್ಲಿಯೋ ಕನ್ನಡ ಶಾಲೆ ಮಾಸ್ತರ್< ಹೈ ಸ್ಕೂಲ ಸರ್< ಕಾಲೇಜ್ ಪ್ರೊಫೇಸರ್ ಇದೆ ಸಮಾಜದಲ್ಲಿ ಅಂತ ನನ್ನ ಅನಿಸಿಕೆ.

ಹೀಗೆ ನನ್ನ ಬ್ಲಾಗಿಗೆ ಭೇಟಿ ನೀಡುತ್ತಿರಿ..

-ಸಾಗರಿ