Thursday, April 8, 2010

ಈ ಕವನ ರಾತ್ರಿ ರಾಣಿಯರಿಗಾಗಿ

ಅವಳೂ ಮತ್ತು ಅವನೂ....

ಲಗು ಬಗನೆ ಮಾಡಿಟ್ಟ
ಪಲ್ಯ, ಗೊಜ್ಜು, ಹುಳಿ
ಒಗ್ಗರಿಸಲೂ ಮರೆತ ತಂಬಳಿ
ಪುರುಸೊತ್ತಿಲ್ಲದೆ ಗಿಳಿಗೂಟಕ್ಕೆ
ಹಾಗೆಯೇ ಸಿಕ್ಕಿಸಿದ ಸೀರೆ, ಪರಿಕಾರ, ಕೌಪು
ಸರಗೋಲು ಸರಿಸಲೂ ಮರೆತ ನೆನಪು..
'ಎನೆನ್ನುವನೋ ನನ್ನ ಮಗರಾಯ
ಇವತ್ತಿನ ಕೊನೆಯ ಗಿರಾಕಿ ಮುಗಿದರೆ ಸಾಕು'
ಎಂದು ಓಡಲು ತಯಾರಾದ ಕಾಲು
ಅವಳು ಮೈ ಕೊಡವಿ ಮೇಲೆದ್ದು
ನೆರಿಗೆ ಎಣಿಸಿ, ಸೆರಗ ಮುಸುಕೆಳೆದಳು...


ಹೊರಗಡೆ ಯಜಮಾನಪ್ಪನ ಜೋರು
ಬಿಚ್ಚಯ್ಯ ಇನ್ನೂ ಒಂದು ನೂರು
ನಡೆದಿತ್ತು ಚೌಕಾಸಿ
ಕದ ಮುಚ್ಚಿದ ಕೋಣೆಯೊಳಗೆ ಎಲ್ಲವೂ ಅಸಷ್ಟ.
ಏನೇನೋ ಮಸಲತ್ತು ನಡೆಸಿ
ಒಳಬಂದ ಅವನು
ಅವಳ ಇಂದಿನ ಕೊನೆಯ ಗಿರಾಕಿ.


ದಂಧೆಯ ಉಸೂಲೇ ಹಾಗೆ
ನಯ, ನಾಜೂಕು, ನಾಚಿಕೆ, ಹುಸಿ ಮುನಿಸು, ನಗು
ದಿನ ದಿನವೂ ನವ ವಧುವಿನ ಬಳುಕು
ವಯ್ಯಾರದ ಥಳಕು.
ಆದರೂ ಅವಳಿಗೆ ಒಳಗೊಳಗೆ
ಮಗನದೇ ಹಂಬಲ
ಹಸಿದುಬಂದವ ಉಂಡನೋ
ಇಲ್ಲಾ ಹಾಗೆಯೇ ಒರಗಿಬಿಟ್ಟನೋ..


ಒಳ
ಬಂದವನು ಹಾಗೆಯೇ ತಲೆಗೆ ಹೊದ್ದ
ಸೆರಗನ್ನೂ ಸರಿಸದೆ ಕೈ ಹಿಡಿದ ಮೆತ್ತಗೆ,
ಅವಳೂ ತಲೆ ಎತ್ತಲಿಲ್ಲ,
ಎಂದಿನಂತೆ ನಾಚಿ ನೀರಾದಳು..
ಮತ್ತೆ ಮತ್ತೆ
ಮೆಲ್ಲಗೆ ಅವನ ಕೈ ಅಮುಕಿದಳು,, ಅವಳಿಗೋ
ಮಗನದೇ ಚಿಂತೆ..
ವರ್ಷ ಇಪ್ಪತ್ತಾದರೂ ಮಗನಿಗಿದು
ತಿಳಿದಿಲ್ಲ, ಎಷ್ಟಾದರೂ ಹೈ ಗೈ ಎನ್ನದಂತೆ
ಸಾಕಿಲ್ಲವೆ ಇವಳು!!


ಅವನಿನ್ನೂ ಕೈ ಹಿಡಿದೇ ನಿಂತಿದ್ದ
ಮುಂದುವರಿಯದೆ,,
ತಾಳಲಾರದೆ ಅವಳೇ ಕೇಳಿದಳು
ತಲೆ ಎತ್ತದೆ,,
ಮೊದಲ ಬಾರಿಯೇ????
....
....
....

ಸಂಕೋಚವೇ????
ಅವನೆಂದ
ಹಾಗೇನಿಲ್ಲ,
ನಡೆಯಮ್ಮ ಹೋಗೋಣ ಮನೆಗೆ...

ದನಿ ಕೇಳಿ
ಕತ್ತಲಾದಂತೆನಿಸಿ
ಆಸರೆಗೆ ಅವನಿಗಾಗಿ ತಡಕಾಡಿದಳು..


ಚಿಕ್ಕ ಮಾತು:
ಈಗ್ಗೆ ಮೂರು ವರ್ಷದ ಹಿಂದೆ ನಾನು IFMR ಲ್ಲಿ ಫೀಲ್ಡ್ ಇನ್ವೆಸ್ಟಿಗೇಟರ್ ಅಗಿದ್ದಾಗಲೂ ISEC (Institute for Social & Economic Change) ವಸತಿ ನಿಲಯದಲ್ಲಿ ನನ್ನ ಸೀನಿಯರ್ (ಆಕೆ ನನಗೆ ಅಕ್ಕನಿಗಿಂತಲೂ ಒಂದು ಕೈ ಮಿಗಿಲು) ಜೊತೆ ಇದ್ದೆ. ಭಾನುವಾರ ಅಥವಾ ಹಬ್ಬ ಹರಿದಿನದ ರಜಾ ದಿನಗಳಲ್ಲಿ ನಾನು ಕನ್ನಡ-ಹಿಂದಿ ಟ್ರಾನ್ಸ್ಲೇಟರ್ ಆಗಿ research students ಜೊತೆ ಅಗಾಗ ಹೋಗುವುದಿತ್ತು. ಅಂದೂ ಹೋಗಿದ್ದೆ, ರಾಜರಾಜೇಶ್ವರಿ ನಗರದ ಸಮೀಪ ಇರುವ ನಾಯಂಡ ಹಳ್ಳಿಗೆ.. AIDS ತಗಲಿದ ವೇಶ್ಯೆಯರ ಜೊತೆ ಮಾತು ಕತೆಗೆ. ಇದೊಂದು ಥರದ ಬೇರೆಯದೇ ರೀತಿಯ ಅನುಭವ ಕೊಟ್ಟಿತ್ತು ನನಗೆ.

28-30 ಮಹಿಳೆಯರಿರುವ ಸಂಘ ಅದು. ಚಿಕ್ಕ ರೂಮನ್ನು ಬಾಡಿಗೆಗೆ ಹಿಡಿದವರು ಸಂಘದ ಅಧೀಕೃತ ಸಭೆಗೆ ಅಲ್ಲಿಯೇ ವಾರಕ್ಕೆ ಮೂರು ದಿನ ಸೇರುತ್ತಿದ್ದರು. ಆಚೀಚೆಯವರಿಗೆ, ಖುದ್ದು ರೂಮನ್ನು ಬಾಡಿಗೆಗೆ ಕೊಟ್ಟ ಮಾಲೀಕನಿಗೂ ಇವರು AIDS ತಗಲಿದ ವೇಶ್ಯೆಯರೆಂದು ಗೊತ್ತಿಲ್ಲ. ನಮ್ಮನ್ನು ಅವರ ನಾಯಕಿ(ಸಂಘದ ಅಧ್ಯಕ್ಷೆ) ಬಹಳ ಆದರದಿಂದ ಬರಮಾಡಿಕೊಂಡರು. ಒಬ್ಬೊಬ್ಬರನ್ನಾಗಿ ಒಳ ಕರೆದು ಮಾತನಾಡಿಸುವುದು ಮತ್ತು ಮೊದಲೇ ತಯಾರಿಸಿದ ಒಂದಿಷ್ಟು ಪ್ರಶ್ನೆಗಳನ್ನು ಅವರಿಗೆ ಕೇಳುವುದು ನಮ್ಮ ಅಂದಿನ ಕೆಲಸ.

ಪ್ರತಿಯೊಂದು ಪ್ರಶ್ನೆಯೂ ಅತೀ ವೈಯಕ್ತಿಕವಾದ್ದು ಮತ್ತು ಮುಜುಗರ ತರಿಸುವಂಥದ್ದು. ಆದರೂ ಯಾರೊಬ್ಬರೂ ನಮ್ಮನ್ನು ಬೈಯದೆ, ತರಾಟೆಗೆ ತಗೊಳ್ಳದೆ ಬಹಳ ಸಹಕರಿಸಿದ್ದರು, ಅವರೆಲ್ಲರ ಕಣ್ಣೀರು ನಮ್ಮ ಹೆಗಲನ್ನೆಲ್ಲಾ ತೋಯಿಸಿತ್ತು. ಒಬ್ಬೊಬ್ಬರೂ ಅದೆಷ್ಟು ನೋವನುಂಡವರು...!! ಅವರಲ್ಲಿ ಕೆಲವರು ನಮ್ಮೆಲ್ಲರಂತೆ ಕುಟುಂಬಸ್ಥರು. ಗಂಡ ಹೆಂಡತಿ ಮಕ್ಕಳು...ಎಲ್ಲರೊಂದಿಗೆ ಸಾಮಾನ್ಯರಂತೆ ಬದುಕುವುದು, ಗಿರಾಕಿ ಬಂದಾಗ ಮಾತ್ರ ಶುದ್ಧ ವೇಶ್ಯಯರಾಗುವರು. ಅತ್ಯಾಶ್ಚರ್ಯವೆಂದರೆ ಅವರಲ್ಲಿನ ಎಷ್ಟೋ ಮಹಿಳೆಯರ ಮನೆಯವರಿಗೆ ಅವರು ವೇಶ್ಯೆ ಎಂಬುದೇ ಗೊತ್ತಿಲ್ಲ.., ಅವರೊಂದಿಗೆ ನಡೆದ ಮಾತು ಕತೆ ಹೇಳುವುದು ಬೇಕಷ್ಟಿದೆ.. ಅವೆಲ್ಲ ಇಲ್ಲಿ ಅಪ್ರಸ್ತುತ. ಒಟ್ಟಿನಲ್ಲಿ ಅಂದು ನಮ್ಮೊಂದಿಗೆ ಪ್ರೀತಿಯಿಂದ ಬೆರೆತು, ಅವರ ದುಃಖಕ್ಕೆ ನಮ್ಮ ಹೆಗಲನ್ನು ಆಸರೆಯಾಗಿ ಬಳಸಿ ಆತ್ಮೀಯತೆ ಮೆರೆದ, ಅವರ ತಟ್ಟೆಯ ಅನ್ನವನ್ನು ಕೈ ತುತ್ತೆಂದು ನಮಗೆ ಉಣ್ಣಿಸಿದ ಆ ಎಲ್ಲ ವೆಶ್ಯಾ ಮಣಿಗಳಿಗಾಗಿ ಈ ಕವನ...