
ಮಗನಿಗೊಂದು ಪತ್ರ.
ಮಗೂ,
ಮುಂದೆಂದೂ ಬರೆಯಲಾಗದೇನೋ ಎನ್ನಿಸಿ ನಿನಗೆ ಈ ಪತ್ರವನ್ನು ಈಗಲೇ ಬರೆತ್ತಿದ್ದೇನೆ. ನನ್ನ ಜೀವವೇ ನೀನಾಗಿರುವಾಗ ಎದುರಿಗೆ ನೀ ನಿಂತು ಕೇಳಿದರೂ ಮಾತಲ್ಲಿ ನಾ ಹೇಳಬಲ್ಲೆ ಎಂಬ ನಂಬಿಕೆ ಇಲ್ಲದ ಕೆಲವು ಭಾವನೆಗಳನ್ನ ಪತ್ರದಲ್ಲಿ ಬರೆದಿರುವೆ. ಸಾವಧಾನವಾಗಿ ಓದಿಕೋ. ದೇವರು ನಿನಗೆ ಒಳ್ಳೆಯ ಆಯುಷ್ಯ, ಆರೋಗ್ಯ, ನೆಮ್ಮದಿ ಕೊಟ್ಟು ಕರುಣಿಸಲಿ
ಪಕ್ಕದಲ್ಲೇ ಮಲಗಿರುವ ನಿನ್ನ ಚಿಣಕಿ ಪಿಣಕಿ ಬೆರಳುಗಳು, ಮೆತ್ತನೆಯ ಗಂಧದ ಬಣ್ಣದ ನಿನ್ನ ಮೈ ಕೈ, ಹಲ್ಲುಜ್ಜಲೂ ಬಿಡದೆ ಹಳದಿಗಟ್ಟಿಸಿಕೊಂಡಿರುವ ಹಲ್ಲು, ಎಷ್ಟೇ ಆಡಿ ಕುಣಿದರೂ ದಣಿಯದ ಆ ಪುಟ್ಟ ಕಾಲ್ಗಳು, ಕೆನ್ನೆ ಮೇಲೆ ಇನ್ನೂ ಆರದೆ ಉಳಿದಿರುವ ಎರಡು ಬಿಂದು ಕಣ್ಣೀರು, ಕೆಂದುಟಿಗಂಟಿರುವ ಹನಿ-ಹನಿ ಹಾಲು.... ಮಲಗೆನೆಂದು ಅತ್ತೂ ಅತ್ತೂ ಬಳಲಿ ಮಲಗಿದೆಯಲ್ಲ ಕಂದ!! ನಿನ್ನ ತುಂಟತನ ಸಹಿಸಲಾಗದೆ ನಾ ನಿನಗೆ ಬೈದಾಗಲೆಲ್ಲ ಏನೂ ಅರಿಯದವನಂತೆ ಮಿಕ ಮಿಕ ಕಣ್ಣಗಲಿಸಿ ಬೆದರಿದ ಹರಿಣಿಯಂತೆ ನನ್ನುಸಿರ ಬಿಸಿಗೆ ಬೆಚ್ಚಗಾಗೋಣವೆಂದು ಓಡಿ ಬಂದು ನನ್ನ ತಬ್ಬುವೆಯಲ್ಲ ಕಂದ,, ನಿನ್ನದು ಅದೆಂತಹ ಪ್ರೀತಿ! ಅಮ್ಮನ ಮಡಿಲೇ ಹಾಗೆ ಎಲ್ಲಿಯೂ ಸಿಗದ ಶಾಂತಿ, ನೆಮ್ಮದಿ, ಸುರಕ್ಷಿತತೆಯ ಭಾವ.. ಎಲ್ಲವನ್ನೂ ನೀಡುತ್ತದೆ.
ನಿನ್ನಂತೆಯೇ ನಾನೂ ಇದ್ದೆನಂತೆ ಪುಟ್ಟ ಕೈ, ಕಾಲು, ಬಾಯಿ..ಎಲ್ಲಾ. ನನ್ನ ಆಯಿಯ ಸೆರಗಂಚು ಹಿಡಿದು ಭಯ ಅಂತ ನಿನ್ನೆ ಮೊನ್ನೆವರೆಗೂ ಓಡಾಡಿಕೊಂಡಿದ್ದೆ. ಇಂದು ಹೆದರದಿರೆಂದು ನಿನ್ನನ್ನು ನನ್ನ ತೆಕ್ಕೆಯಲ್ಲಿ ಭದ್ರವಾಗಿರಿಸಿಕೊಂಡು ಓಲೈಸುವಷ್ಟಾಗಿಬಿಟ್ಟಿದ್ದೇನೆ,, ನೆನ್ನೆವರೆಗೂ ಎಲ್ಲಿತ್ತೋ ಈ ತಾಯ್ತನ! ನನ್ನ ಆಯಿಯ ಕಣ್ಣಿಗೆ ನಾನು ಅಶಿಸ್ತೆಂದು ಕಂಡಾಗೆಲ್ಲ "ನೀನೂ ಒಂದು ಹೆಣ್ಣಾ" ಅಂತ ಬೈದಾಗ ನಕ್ಕು ಮೈ ಕೊಡವಿ ಬರುತ್ತಿದ್ದೆ. ಈಗ ಯಾರಾದರೂ "ನೀನೂ ಒಂದು ತಾಯೀನಾ" ಎಂದುಬಿಟ್ಟಾರೆಂದು ನಿನ್ನಾರೈಕೆಯಲ್ಲಿ ಅಚ್ಚುಕಟ್ಟಾಗಿಬಿಟ್ಟಿದ್ದೇನೆ..
ಪೋರಾ,, ಹೀಗೆ ದಿನ ಕಳೆವುದು.., ಅರಿವಿಲ್ಲದೊಂದು ದಿನ ನಿನಗೆ ಕುಡಿ ಮೀಸೆಯೂ ಚಿಗುರುವುದು. ಒಡೆದ ದನಿಯಲ್ಲಿ ಅಮ್ಮಾ ಎಂದು ಕರೆದಾಗ ಕಂದಾ ಎಂದು ಕೆನ್ನೆಗೆ ಮುದ್ದಿಸಲೇ ಎಂಬ ಸಂದಿಗ್ಧತೆ ನನಗೂ ಬರಬಹುದು. ಅದಾಗಲೇ ನೀನು ತನ್ನ ಖಾಸಗಿ ಎಂಬ ಗೋಡೆಯ ಹಿಂದಿನಿಂದ ಇರಮ್ಮಾ ಎಂದು ನಾ ಕರೆದರೂ ನೀ ಬಾರದೆಯೂ ಇರಬಹುದು..
ನೀನು ಈಗ ಒಲ್ಲೆ, ಆಗ ಒಲ್ಲೆ ಎಂದು ರಾಗವೆಳೆದರೂ ನಿನ್ನೊಲವಿಗೊಪ್ಪುವ ಕನ್ಯೆ ನನ್ನ ಸೊಸೆಯಾಗಿ ಬಂದಾಗಲೇ ಈ ಜೀವಕ್ಕೆ ತಂಪು. ಮಗ ಸೊಸೆ ಗುಸು-ಗುಸು ಮಾತಾಡಿಕೊಂಡು ನಕ್ಕಾಗ, ಮನೆ ತುಂಬಿದವಳ ಬಳೆ ಕೋಣೆಯೊಳಗೆ ವಿನಾಕಾರಣ ಘಲ್ ಘಲ್ ಎಂದಾಗ ನನಗೆಷ್ಟು ನೆಮ್ಮದಿಯಾಗುತ್ತೆ ಗೊತ್ತಾ ಕಂದಾ?? ನಾನೂ ಈ ಮನೆಗೆ ಒಂದು ಕಾಲದಲ್ಲಿ ಹೊಸಬಳಾಗಿಯೇ ಬಂದಿದ್ದೆನೆಂಬ ನೆನಪೆಲ್ಲ ನನಗೆ ಬಾರದೆ ಇರದು. ಮಗೂ,, ನಿನ್ನಜ್ಜ ಅಜ್ಜಿಯಂದಿರು ವಾಡಿಕೆಯಂತೆ ನಿನ್ನ ಸೊಸೆಗೆ ಎಂತಹ ಪ್ಲಾನಿಂಗೂ ಬೇಡಾ ಎಂದು ಹೆಳುವಂತೆ ನನ್ನ ಒತ್ತಾಯಿಸುವುದಂತೂ ಖಂಡಿತ.
ನಿನ್ನ ಎಲ್ಲಾ ತುಂಟತನದ ಫೋಟೊ, ಆಟಿಕೆ, ನೀನು ಮೊತ್ತ ಮೊದಲು ತೊಟ್ಟ ಬಟ್ಟೆ, ನಿನ್ನ ದೇವರ ಕೂದಲು ಉದುರಿದಾಗ ಎತ್ತಿಟ್ಟ ಆ ಸಿಕ್ಕು ಸಿಕ್ಕಿನ ಕೂದಲ ಗಂಟು, ನಿನ್ನ ತುಂಟಾಟಕ್ಕೆ ಸೋತು ಉದುರಿದ ಕಾಲ್ಗೆಜ್ಜೆಯ ಗೆಜ್ಜೆ ಗುಂಡು.. ಎಲ್ಲವನ್ನೂ ನಾನು ಭದ್ರವಾಗಿ ಎತ್ತಿಟ್ಟು ಜೋಪಾನ ಮಾಡುತ್ತಿದ್ದೇನೆ.., ನನ್ನ ಮೊಮ್ಮಕ್ಕಳಿಗೆ ಇದನ್ನೆಲ್ಲ ತೋರಿಸಿ ಕತೆ ಹೇಳಲಿಕ್ಕಾಗಿ.
ಮದುವೆಯಾದ ಮೇಲೆ ನನ್ನ ವಯಸ್ಸಿನವರೂ ನನ್ನನ್ನು ಆಂಟಿ ಎಂದಾಗ ನನಗಾದ ಮುಜುಗರ ಅಷ್ಟಿಷ್ಟಲ್ಲ, ಆದರೆ ಈಗ ಅಜ್ಜಿ ಎನಿಸಿಕೊಳ್ಳಲು ಆಗುತ್ತಿರುವ ತವಕ ಮಾತ್ರ ಹೇಳತೀರದು..
ನಿನ್ನ ಸಂಸಾರದ ವಾಸ್ತವದ ಜವಾಬ್ದಾರಿ ಶುರು ಆಗೋದು ನೀನು ಅಪ್ಪ ಎನ್ನಿಸಿಕೊಂಡಾಗಿನಿಂದ. ಮಕ್ಕಳನ್ನ ಹೆರ್ತೀಯೋ ಮಸಣಕ್ಕೆ ಹೋಗ್ತೀಯೋ ಅಂತ ನಮ್ಮನೆಗೆ ಬರುತ್ತಿದ್ದ ಕೆಲಸದ ಶಿವಮ್ಮ ಹೇಳ್ತಾ ಇರ್ತಿದ್ಲು. ಆದ್ರೆ ಪಶುವಂತೆ ಶಿಶುತನವ ಕಳೆದನಾ ಕೃಷ್ಣ ಎಂಬ ಮಾತೂ ನೆನಪಲ್ಲಿಡು. ತಲೆ ನೋವೆಂದು ಹೇಳಲಾಗದೆ ಹೊಟ್ಟೆ ನೋವಿಗೆ ಮದ್ದು ಕುಡಿವ ಮುದ್ದು ಕಂದಮ್ಮನ ಮೇಲೆ ಎಂದಿಗೂ ಅಕ್ಕರೆಯಿರಲಿ.
ನನ್ನ ದೊರೆಯೇ,, ಮೊಮ್ಮಕ್ಕಳಾಟದಲ್ಲಿ ನನ್ನ ಚರ್ಮ ಸುಕ್ಕಿದ್ದು ಮರೆಯುವುದೋ ಎನೋ?! ಹಲ್ಲುಗಳುದುರಿ ನಾನು ಅಕರಾಳ-ವಿಕರಾಳವಾಗಬಹುದು. ನೀನು ಬಳಿ ನಿಂತು ಅಮ್ಮ ಎಂದು ಕರೆದಿದ್ದೂ ಕೇಳಿಸದಷ್ಟು ಕಿವಿ ದೂರಾಗಿ ಚಾಳೀಸಿನ ನಂಬರ್ ಎರುತ್ತಾ ಹೋಗುತ್ತದೆಯಲ್ಲವೇ ನನಗೆ..? ಪಕ್ಕದ ಕೇರಿಯ ಮಾಯಬ್ಬೆಗೆ ಅರುಳು ಮರುಳಂತೆ ಎರಡು ತಿಂಗಳಿನಿಂದ. ಈ ಲೋಕದ ಖಬರ್ರೇ ಇರೊಲ್ವಂತೆ. ಮಿಮ್ಮಕ್ಕಳ ಬರುವು ಹಾಯುವ ವಯಸ್ಸಲ್ಲಿ ತನ್ನ ಮಗನಿನಿಗೇಂತ ತೊಟ್ಟಿಲು ಕಟ್ಟಿ ಜೋಗುಳ ಹಾಡ್ತಾಳಂತೆ. ಬರುವ ಜಾತ್ರೆಗೆ ಹೊಸ ಲಂಗ ತಗೋಬೇಕಂತ ದುಡ್ಡೂ ಜಮಾ ಮಾಡ್ತಿದಾಳಂತೆ..!! ಯಾರ್ಯಾರ ಕಾಲ ಹೇಗೋ ತಿಳಿಯದು. ಸುಖದ ಮರಣವನ್ನೂ ಕೇಳಿ ಬಂದಿರ ಬೇಕು. ನನ್ನ ಕತ್ತಿನಲ್ಲಿ ತಾಳಿ ತೂಗಿದಾಗಿಂದ ತುಪ್ಪದ ದೀಪ ಹಚ್ಚಿ ಮುತ್ತೈದೆಯಾಗಿ ಸಾಯುವ ಭಾಗ್ಯ ನನ್ನದಾಗಲಿ ಎಂದು ಬೇಡಿದ್ದು ಸಾರ್ಥಕವಾಗಲಿ ಎಂದು ನೀನೂ ಪ್ರಾರ್ಥಿಸು ಕಂದಾ. ಹೆತ್ತವರು ವಯಸ್ಸಾಗಿ ಎಷ್ಟೇ ನಮೆಯುತ್ತಿದ್ದರೂ ಮಕ್ಕಳಿಗೆ ಹೆತ್ತವರ ಸಾವನ್ನು ಪ್ರಾರ್ಥಿಸುವುದು ಸುಲಭವಲ್ಲ ಅಲ್ಲವಾ?? ನಾನಿಲ್ಲವಾದಾಗ ನನಗಿಂತ ಅತಿಯಾಗಿ ನಿನ್ನನ್ನು ಪ್ರೀತಿಸಿದ ನಿನ್ನ ತಂದೆಗೆ ಎಂತಹ ನೋವು ಆಗದಂತೆ ಕಾಪಾಡಿಕೊಂಡರೆ ನನಗದೇ ಭಾಗ್ಯ.
ಮುಪ್ಪು ಮನುಷ್ಯರ ಶತ್ರು ಕಣೋ,, ಬರೀ ರೋಗದ ಭೀತಿ, ನಿರ್ಲಕ್ಷ್ಯಕ್ಕೊಳಗಾಗಬಹುದೆಂಬ ಆತಂಕದ ಗೂಡು ಅದು. ಅವಲಂಬಿಸಿ ಬದುಕಲೂ ಕಷ್ಟವಾಗುವ ಅತ್ತ ಸಾಯಲೂ ಆಗದ ಸ್ಥಿತಿ. ಎಂತಹ ರೋಗವೂ ಬಾಧಿಸದೆ ನಿನ್ನ ಹೆತ್ತರಿಗೆ ಸುಖದ ಸಾವು ಬರಲೆಂದುಕೋ ಮಗನೇ.. ನಮಗೆ ಜಾಡ್ಯವಂಟಿದರೆ ನಿನಗೆಷ್ಟು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ತೊಂದರೆಯಾಗಬಹುದೇನೋ ಎಂಬ ಆತಂಕ ನನಗೆ. ಆ ಕಾಲಕ್ಕೆ ದಯಾ ಮರಣವೆನ್ನುವುದು ನಮ್ಮ ದೇಶದಲ್ಲೂ ಜಾರಿಗೆ ಬಂದಿದ್ದರೆ ಒಂದು ರೀತಿಯಲ್ಲಿ ಮುಪ್ಪಿನಲ್ಲೂ ದಿನ ದೂಡಲು ಧೈರ್ಯ ಮತ್ತು ನೆಮ್ಮದಿ ಇರುತ್ತಿತ್ತು.
ಎಷ್ಟೋ ಜನ್ಮದ ಋಣಾನುಬಂಧದಿಂದ ನಾವು ಹೀಗೆ ಸಂಬಂಧ ಹೊಂದಿ ಸಂಧಿಸುತ್ತೇವಂತೆ.., ನನ್ನ ನಲ್ಮೆಯ ಗಂಡನಿಗೆ ಹೆಂಡತಿಯಾಗಿ, ನಿನ್ನಂತಹ ಅಕ್ಕರೆಯ ಕಂದನಿಗೆ ಬರುವ ಜನ್ಮದಲ್ಲಿಯೂ ಅಮ್ಮನಾಗುವ ಆಸೆ ಕಣೋ. ನನ್ನ ತಾಳ್ಮೆ ಮೀರಿದಾಗ ನಿನ್ನ ತಪ್ಪಿಲ್ಲದೆಯೂ ನೀನು ನನ್ನಿಂದ ಶಿಕ್ಷೆಗೊಳಗಾಗಿರಬಹುದು,,, ನನ್ನಂತಹ ಅಮ್ಮಂದಿರ ಸಹವಾಸ ಸಾಕು ಎಂದು ನಿನಗೆ ಯಾವತ್ತಾದರೂ ಎನ್ನಿಸಬಹುದು.. ಆದರೆ ಮಗೂ ಯಾವದನ್ನೂ ಮನಸ್ಸಿಗೆ ತಗೊಳ್ಳದೆ ನನ್ನ ಮುಂದಿನ ಜನ್ಮದಲ್ಲೂ ನೀ ನನಗೆ ಮಗನಾಗಿ ಬರುವೆ ಎಂದು ಸುಳ್ಳಾದರೂ ಒಮ್ಮೆ ಆಶ್ವಾಸನೆ ಕೊಟ್ಟುಬಿಡೋ. ಸಾಯುವ ಈ ಜೀವಕ್ಕೆ ಸಾವೂ ಒಂದು ಆಶಾ ಕಿರಣದಂತೆ ಕಾಣಬಹುದು....
ಇಂತಿ ನಿನ್ನ
ಅಮ್ಮ.
22 comments:
ಶಿಶುವಿಹಾರದಿಂದ ಕೊನೆಯವರೆಗಿನ ಎಲ್ಲಾ ವಾಸ್ತವಗಳು ಈ ಪತ್ರದಲ್ಲಿದೆ.ನೋದ ಮನಕ್ಕೆ ಕೆಲವೊಮ್ಮೆ ಸಾವೂ ಆಶಾಕಿರಣವಾಗುತ್ತದೆ. ಸುಂದರ ಬರಹ..ಧನ್ಯವಾದ
ಸಾಗರಿ,
ನಿಮ್ಮ ಬರಹಗಳು ಖುಷಿ ಕೊಡುತ್ತವೆ,
ಬಹಳಷ್ಟು ದಿನಗಳಿಂದ ಬರಹ ಓದಿ ಕಾಮೆಂಟಿಸಲು ಪ್ರಯತ್ನಿಸುತ್ತಿದ್ದೆ,
ಆದರೆ ಆಗುತ್ತಿರಲಿಲ್ಲ
ಈಗ ಸರಿ ಪಡಿಸಿದ್ದಿರಿ
ಬರಹದ ಸಾಲುಗಳು ಮನ ತಟ್ಟುತ್ತವೆ
ನಿಮ್ಮ ಉಳಿದ ಬರಹಗಳನ್ನು ಓದಿದ್ದೇನೆ, ಆದರೆ ಕಾಮೆಂಟಿಸಲು ಆಗ ಆಗಲಿಲ್ಲ
ಎಲ್ಲ ಬರಹಗಳೂ ತುಂಬಾ ಚೆನ್ನಾಗಿವೆ
.ಸಾಗರಿಯವರೆ,
..ಭಟ್ಟರೇ ಎಂದದ್ದು ಸಂತೋಷವೇ ಆಯ್ತು. ಶಂಭುಲಿಂಗ ಎಂದರೆ ಇನ್ನೂ ಸಂತೋಷ. :). ನೀವು ಹೀಗೆ ಬರೆಯುತ್ತಿರಿ...ಧನ್ಯವಾದ
ಹೆಣ್ಣಿನ ಬಾಲ್ಯದಿ೦ದ ಮುಪ್ಪಿನವರೆಗಿನ ಅವಳ ಮಗಳು-ತಾಯಿ-ಅಜ್ಜಿ ಯರ ರೂಪಗಳನ್ನು ಮಗನಿಗೆ ಬಿಚ್ಚಿಡುವ ಪರಿ ಮತ್ತು ಕಟು ವಾಸ್ತವ ಹಾಗೂ ಅದನ್ನು ಸಾಮಾನ್ಯ ಎ೦ದು ತೆಗೆದುಕೊಳ್ಳುವ ತಾಯಿಯ ಹೃದಯ ವೈಶಾಲ್ಯ ಆಪ್ತವಾಗಿ ಮನಮಿಡಿಯುವ೦ತೆ ತಮ್ಮ ಪತ್ರಧಾರೆಯಲ್ಲಿ ಹೊಮ್ಮಿದೆ. ಸು೦ದರ ಬರಹ. ವ೦ದನೆಗಳು.
ಸಾಗರಿ,
ನಿಮ್ಮ ದೂರ-ದೃಷ್ಟಿಯ ಪಯಣ ತುಂಬಾ ಚೆನ್ನಾಗಿದೆ. ಮಗುವನ್ನು ನೋಡಿದಾಗ ತಾಯಿ ಏನೆಲ್ಲ ಕನಸು ಕಟ್ಟುತ್ತಾಳೆ, ಅಲ್ಲವೆ? ತಾಯಿಯ ವಾತ್ಸಲ್ಯದಿಂದ ಕೂಡಿದ ನಿಮ್ಮ ಕನಸುಗಳು
ಸುಂದರವಾಗಿವೆ.
ಶಂಭುಲಿಂಗ ಅವರೆ,
ಪತ್ರ ಓದಿದ್ದಕ್ಕೆ ಧನ್ಯವಾದಗಳು. ಕಾಲ ಕಳೆವುದು ಅರಿವಿಗೇ ಬಾರದು, ಭೂಮಿ ತಿರುಗುವುದು ನಮಗೆ ತಿಳಿವುದೇ??? ಶೈಶವ, ಬಾಲ್ಯ ಕಳೆದು ಯೌವ್ವನದ ಗೃಹಸ್ಥಾಶ್ರಮ ನಡೆಯುತ್ತಿದೆ. ಇನ್ನು ವಾನಪ್ರಸ್ಥವೂ ಅರಿವಿಲ್ಲದೊಂದು ದಿನ ಬಂದೇಬಿಡುತ್ತೆ. ಎಂತಹ ಗತಿ ಕಾಲದ್ದು.. ಕಾಮೆಂಟಿಸಿದ್ದಕ್ಕೆ ವಂದನೆಗಳು.
ಗುರು ಅವರೇ,
ತುಂಬಾ ಧನ್ಯವಾದಗಳು. ಒಂದೇ ಒಂದು ಕಾಮೆಂಟ್ ಕೂಡ ಬರೊಲ್ವಲ್ಲ ಅಂತ ಒಮ್ಮೊಮ್ಮೆ ಯೋಚಿಸಿದ್ದೂ ಇತ್ತು, ಹೀಗೇ ಮುಂದುವರಿದರೆ ಒಂದು ಕವನವನ್ನು ಬರೆದು ಪ್ರಕಟಿಸುವ ಅಂತ ಅಂದುಕೊಂಡಿದ್ದೆ. ಆ ಕವನವನ್ನು ಈಗ ಪ್ರಕಟಿಸುವ ಅವಶ್ಯಕತೆ ಇಲ್ಲ ಆದರೂ ಅದನ್ನು ಇಲ್ಲಿ ಬರೆದುಬಿಡುವಾ ಅಂತ..
ಪ್ರಿಯ ಕಾಮೆಂಟಿಗರೇ,
ಒಂದು ಸಾಲಾದರೂ ಬರೆಯಿರಿ ನನಗಾಗಿ
ಈ ಮಾತು ಸತ್ಯ, ಮಿಥ್ಯವಿದೆ ಇಲ್ಲಿ
ಹಿಡಿತ ತಪ್ಪಿದೆ ತುದಿಗೆ
ಬುಡ ಅರ್ಥವೇ ಇಲ್ಲದಂತಿದೆ..
ಚುಚ್ಚಿಯಾದರೂ ಹೇಳಿ
ಒಡೆದ ಪುಗ್ಗಿಯಂತಾಗೊಲ್ಲ ನನ್ನ ಮನ,
ತಪ್ಪೆನಿಸಿದರೆ ತಿದ್ದುವೆ
ಒಪ್ಪೆನಿಸಿದರೆ ನಲಿವೆ...
ಒಂದು ಸಾಲಾದರೂ ಬರೆಯಿರಿ ನನಗಾಗಿ...
ಹೋಗಲಿ ಬಿಡಿ
"ಸಾಗರಿ, ನೀ ಬರೆವುದೆಲ್ಲಾ ಜೊಳ್ಳು ಪೊಳ್ಳು
ಪ್ರತಿಸಲವೂ
ಬ್ಲಾಗೆಂಬ ಬಿಂದಿಗೆಯಲ್ಲಿ
ಹಳಸಲಿಟ್ಟು
ಬಿಂಕಿಸುವುದು.. ಯಾಕೆ ಹೇಳು
ಇನ್ನಾದರೂ
ಬರೆವುದ ಬಿಟ್ಟು
ನಿನ್ನ
ಬದುಕ ನೋಡಿಕೋ
ನಮಗಷ್ಟೇ ಸಾಕು.."
ಅಂತಾದರೂ ಹೇಳಿಬಿಡಿ..
ತಪ್ಪು ನನ್ನದೆ ಎಂದು ತಿಳಿದಿದ್ದು ಮೊನ್ನೆ.
ಹೀಗೆ ಪ್ರೋತ್ಸಾಹಿಸುತ್ತಿರಿ.
ಸೀತಾರಮ್ ಸರ್,
ಎಂತಹ ಹಮ್ಮಿನಿಂದ ಬದುಕಿದ ಜೀವವಾದರೂ ಒಂದಿನ ವೃದ್ಧಾಪ್ಯ ಕಾಣಲೇ ಬೇಕು. ವೃದ್ಧಾಪ್ಯದ ಬಿಸಿ ಎಷ್ಟೋ ದೂರದಿಂದ ಅವನನ್ನು ಸುಟ್ಟಿದ್ದರಿಂದಲೇ ಅವ ಬೆಳಕು ಕಂಡ. ಅನ್ನಿಸಿದ್ದನ್ನು ಬರೆದೆ ಓದಿ ಕಾಮೆಂಟಿಸಿದ್ದಕ್ಕೆ, ಧನ್ಯವಾದಗಳು.
ಕಾಕಾ,
ಜನಪದದ ಜನ(ಜಾನಪದದಲ್ಲಿ) ಹೆಣ್ಣು ಮಕ್ಕಳಿಗಾಗಿ ಎಷ್ಟು ಪದ್ಯ ಹೆಣೆದಿಲ್ಲ ಹೇಳಿ. ಮಗನಿಗಾಗಿ ಸಂಕ್ಷಿಪ್ತವಾಗಿ ಏನಾದರೂ ಬರೆಯೋಣ ಎನ್ನಿಸಿತು. ಅದಕ್ಕೇ ಬರೆದೆ. ಖುಷಿಕೊಟ್ಟಿದ್ದೇ ಆದಲ್ಲಿ ನನಗಷ್ಟೇ ಸಾಕು.
ಸಾಗರಿ, ನಿಮ್ಮ ಈ ಕವನ ಇನಿಯನಿಗೊಂದು ಕವನದ ಬ್ಲಾಗಿನಲ್ಲಿ ಬಹಳ ಹಿಡಿಸಿತು....
ನಿನ್ನ ಭಾವಕೊಂದು ಚಿಲುಮೆ
ಬತ್ತದಂತೆ ಇರಲು ಒಲುಮೆ
ಇರುವೆ ನಿನ್ನಲಿ
ನೀನೆ ಆಗಿ
ಮಗನ ಬೆಳೆವ ವಿವಿಧ ಹಂತಗಳನ್ನು ಕಂಡು ಸಂಬ್ರಮಪಡುವ ತಾಯ ವಿವಿಧ ಭಾವನೆಗಳನ್ನು ಬಹಳ ಚನ್ನಾಗಿ ಮೂಡಿಸಿದ್ದೀರಿ...,,ಅಭಿನಂದನೆಗಳು...
ಸಾಗರಿ
ನಾನು ನಿಮ್ಮನ್ನು ಕಾಮೆಂಟಿನ ಸಮಸ್ಯೆ ಬಗ್ಗೆ ಕೇಳೋಣ ವೆಂದಿದ್ದೆ
ಯಾಕೆಂದರೆ ನಿಮ್ಮ ಲೇಖನಗಳನ್ನು ತಪ್ಪದೆ ಓದುತ್ತಿದ್ದವ ನಾನು
,ನಿಮ್ಮ ಮೇಲ್ ವಿಳಾಸ ಕ್ಕಾಗಿ ಹುಡುಕಿದೆ
ಎಲ್ಲಿಯೂ ಸಿಗಲಿಲ್ಲ
ಇಂಥಹ ಸಂದರ್ಭಗಳಲ್ಲಿ ಒಂದು ಬೇರೆಯದೇ ಮೇಲ್ ಮಾಡಿ ಇಟ್ಟುಕೊಂಡು ಅದರ ವಿಳಾಸ ಬ್ಲಾಗಿನಲ್ಲಿ ಹಾಕುವುದು ಒಳ್ಳೆಯದು
ಏನಾದರೂ ತೊಂದರೆಯಾದರೆ ನಿಮ್ಮನ್ನೇ ನೇರವಾಗಿ ಕೇಳಬಹುದಲ್ಲ
ಆಜಾದ್ ಸರ್,
ಕವನಗಳನ್ನು ಮತ್ತು ಪತ್ರವನ್ನು ಓದಿ ಪ್ರತಿಕ್ರೀಯಿಸಿದ್ದಕ್ಕೆ ತುಂಬಾ ಧನ್ಯವಾದಗಳು. ತಂದೆ ತಾಯಿಗಳಿಗೆ ಸಾವಿನ ಮನೆ ಸಮೀಪವಿದ್ದರೂ ಮಕ್ಕಳ ಬಗೆಗಿನ ಪ್ರೀತಿ, ತಮ್ಮಿಂದಾಗಿ ಏನಾದರೂ ತೊಂದರೆ ಆದೀತೇನೋ ಅವರಿಗೆ ಎಂಬ ಆತಂಕ ಯಾವತ್ತಿಗೂ ಇದ್ದೇ ಇರುತ್ತದೆ ಎಂಬುದನ್ನು ಬಿಂಬಿಸಲು ಪ್ರಯತ್ನಿಸಿದ್ದೆ. ಆ ಆತಂಕ ನಿಮ್ಮ ಗಮನಕ್ಕೆ ಬಂದಿದ್ದರೆ ನಾನು ಬರೆದಿದ್ದು ಸ್ವಲ್ಪವಾದರೂ ಸಾರ್ಥಕವಾದಂತೆ.
ಗುರು ಅವರೇ,
ನೀವು ಹೇಳಿದಂತೆ ಒಂದು e mail account open ಮಾಡಿ ಅದರ ವಿಳಾಸವನ್ನು ಬ್ಲಾಗಿನಲ್ಲಿ ಹಾಕಲು ಆದಷ್ಟು ಬೆಗ ಪ್ರಯತ್ನಿಸುವೆ. ನನ್ನ ಮಗ ಅಹನ್ ಸ್ವಲ್ಪ ಚಿಕ್ಕವನಾದ್ದರಿಂದ ಅವನು ಎಚ್ಚರವಿದ್ದಾಗ computer ಮುಟ್ಟುವಂತೆಯೂ ಇಲ್ಲ, ಅವನು ಮಲಗಿದಾಗ ಬಾಕಿ ಎಲ್ಲಾ ಕೆಲಸ ಮುಗಿಸಿ ಬ್ಲಾಗ್ ಓದುವ ವೇಳೆಗೆಲ್ಲಾ ಅವನ ಏಳುವ ಸಮಯವಾಗಿಬಿಡುತ್ತದೆ, ಆದರೂ ಆದಷ್ಟು ಬೇಗ ಈ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಯತ್ನಿಸುವೆ. ನಿಮ್ಮ ಉಪಾಯಕ್ಕೆ thanks.
ಸಕಾಲಿಕ ಬರಹ, ಶಿಶುವಿಹಾರಗಳ, ಅನಾಥಾಶ್ರಮಗಳ, ವೃದ್ಧಾಶ್ರಮಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ, ಆಮೇಲೆ ಮರೆತುಬಿಡುತ್ತೇವೆ, ಅದಕ್ಕೆ ಎಚ್ಚರಿಸಿದ ಲೇಖನ,ಧನ್ಯವಾದ
ಸಾಗರಿ ಅವರೇ,
ಅಕ್ಕರೆಯಿಂದ ತುಂಬಿದ ಸುಂದರವಾದ ಪತ್ರ...
ನಿಮ್ಮ ಕವನಗಳು ತುಂಬಾ ಹಿಡಿಸಿದವು..
-ಗೋದಾವರಿ
ವಿ.ಆರ್.ಭಟ್ ಅವರೇ,
ಪತ್ರವನ್ನು ಓದಿದ್ದಕ್ಕೆ ಧನ್ಯವಾದಗಳು. ಹೀಗೇ ಪ್ರೋತ್ಸಾಹಿಸುತ್ತಿರಿ.
ಗೋದಾವರಿ ಅವರೇ,
ಕವನಗಳನ್ನು, ಪತ್ರವನ್ನೂ ಓದಿದ್ದಕ್ಕೆ ಧನ್ಯವಾದಗಳು. ಬರಹ ನಿಮಗೆ ಖುಷಿ ಕೊಟ್ಟರೆ ನನಗೆ ಬಹಳ ಸಂತೋಷ.
ಅಕ್ಕರೆಯಿಂದ ತುಂಬಿದ ಸುಂದರವಾದ ಪತ್ರ
ತುಂಬಾ ಆಪ್ತವಾಗಿದೆ ನಿಮ್ಮ ನಿವೇದನೆ. ನಿಮ್ಮ ಮಗ ಮುಂದೊಂದು ದಿನ ಓದಿದರೆ ಖಂಡಿತ ನಿಮ್ಮ ಆಶಯಗಳನ್ನು ಈಡೇರಿಸಿಯಾನು. ತುಂಬಾ ಚೆನ್ನಾಗಿದೆ ಇನಿಯನಿಗೆ ಬರೆದ ಎರಡು ಕವನ ಕೂಡ :)
ನಿಮ್ಮ ಮೂಲ ಹೆಸರು ಸಾಗರಿಯೇ ಇಲ್ಲಾ ಚಿನ್ಮಯಿಯೇ?
touching!!!!... :-)
ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.
ಇಸ್ಮಾಯಿಲ್, ತೇಜಸ್ವಿನಿ, ದಿವ್ಯಾ ಎಲ್ಲರಿಗೂ ಧನ್ಯವಾದಗಳು
Post a Comment