Thursday, October 21, 2010

ಹುಟ್ಟುಹಬ್ಬದ ಶುಭಾಷಯಗಳೂ ಅಹನ್



(ಅಹನ್ ನ ಅನಾರೋಗ್ಯದ ಕಾರಣದಿಂದ ಬ್ಲಾಗ ಕಡೆ ಮುಖ ಮಾಡಲೂ ಸಾಧ್ಯವಾಗಲಿಲ್ಲ. ಏನೇ ಮಾಡಿದರೂ ಇಳಿಯದ ಅಹನ್ ಜ್ವರ ನಮ್ಮನ್ನೆಲ್ಲ ಕಂಗೆಡಿಸಿ ಬಿಟ್ಟಿತ್ತು. ಹತ್ತು ದಿನದ ಜ್ವರ ಮುಗಿದ ನಾಲ್ಕೇ ದಿನದಲ್ಲಿ ಮತ್ತೊಮ್ಮೆ ಜ್ವರ.. ಹಿಡಿತಕ್ಕೆ ಸಿಗದಂತೆ ಕಳೆದ ಆ ೧೦೩ ರ(103F ತಾಪಮಾನವಿತ್ತು ಆ ಎರಡು ದಿನ) ದಿನಗಳು ಇನ್ನೂ ಭಯಂಕರವಾಗಿಯೆ ಕಣ್ಣಿಗೆ ಕಟ್ಟುತ್ತದೆ. ಡಾಕ್ಟರ್ ಡೆಂಗ್ಯು ಇರಬಹುದೆಂದು ಸಂಶಯಪಟ್ಟಾಗಂತೂ ನಾವು ನಾವಾಗಿಯೇ ಇರಲಿಲ್ಲ. ಎರಡೆರಡು ಸಲ ಬ್ಲಡ್ ಟೆಸ್ಟ್, ಬ್ಲಡ್ ಕಲ್ಚರ್ ಅದೂ ಇದೂ ಅಂತ ಅಹನ್ ರಕ್ತ ತೆಗೆವಾಗ ಅಹನ್ ಜೊತೆ ನಾವೂ ಅತ್ತಿದ್ದೇ ಅತ್ತಿದ್ದು.. ಅಬ್ಬ ದೇವರ ದಯೆ ಡೆಂಗು ಮಲೇರಿಯಾ ಏನೂ ಆಗಿರಲಿಲ್ಲ.. ಬ್ಯಾಕ್ಟೀರಿಯಲ್ ಫ್ಲೂ ಅಂತ ರಿಪೋರ್ಟ್ ಬಂದಾಗಲೇ ನಮ್ಮನೆಯ ವಾತಾವರಣ ತಿಳಿಯಾದದ್ದು.. ಆದ್ದರಿಂದ ನನಗೆ ಯಾರ ಬ್ಲಾಗನ್ನೂ ಓದಲಾಗಲಿಲ್ಲ. ನನ್ನ ಬ್ಲಾಗನ್ನೂ ತೆರೆಯಲಾಗಲಿಲ್ಲ. ತಮ್ಮೆಲ್ಲರನ್ನೂ ಬಹಳ mis ಮಾಡಿಕೊಂಡ್ದ್ದೇನೆ. ಆದರೂ ಇನ್ನೂ ಸ್ವಲ್ಪ ಸಮಯಾವಕಾಶದ ಅಗತ್ಯವಿದೆ ನನಗೆ.. ಅಹನ್ ನ ಎರಡನೆಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದನ್ನು ಬರೆದು ಪೋಸ್ಟ್ ಮಾಡುತ್ತಿದ್ದೇನೆ.)



ಹುಟ್ಟುಹಬ್ಬದ ಶುಭಾಷಯಗಳು ಅಹನ್

ಅಹನ್ ಮೇಲೆ ಪ್ರೀತಿ ಉಕ್ಕಿದಾಗ ಹೆಚ್ಚು ಕಡಿಮೆ ಅವನನ್ನು ಕರೆಯುವಾಗಲೆಲ್ಲ ರಂಗ, ಬೆಣ್ಣೆ ಕೃಷ್ಣ, ಮುದ್ದು ಕೃಷ್ಣ, ಸಿಂಗಾರ, ಬಂಗಾರ.. ಹೀಗೆಯೇ ಇದ್ದ ಹೆಸರಿನ ಸಾಲುಗಳು ಇದ್ದಕ್ಕಿದ್ದಂತೆ ಕಡಿಮೆ ಎನ್ನಿಸಿತು. ಆಗಿನಿಂದ ಈಗಿನವರೆಗೂ ಅಹನ್ ನನ್ನ ಬಾಯಲ್ಲಿ ಮುದ್ದಿನ ಬಿಸ್ಕೀಟು, ಚಾಕ್ಲೇಟು, ಬಕೆಟ್ಟು, ಬ್ಯಾಟರಿ, ಚಂಬು, ದಿಂಬು, ಪಟ್ಟಿ, ಪುಸ್ತಕ, ಸಾಂಬಾರು, ಚಟ್ನಿ ಎಲ್ಲ ಆಗ್ತಾನೆ. ಅವನೂ ಅಷ್ಟೇ ನನ್ನ ಮೇಲೆ ಪ್ರೀತಿ ಉಕ್ಕಿದಾಗೆಲ್ಲ ಓಡಿ ಬಂದು ಕೂದಲು ಹಿಡಿದು ನೆಲದಿಂದ ಕಾಲು ಬಿಟ್ಟು ಜೋಲಿ ಹೊಡೆಯುತ್ತಾನೆ{ಹೀಗೆಂದ ಮಾತ್ರಕ್ಕೆ ನಾನು ನೀಲವೇಣಿ ಎಂದುಕೊಂಡರೆ ಅದು ನಿಮ್ಮದೇ ತಪ್ಪು,, :) } ಪರಪರ ಮುಖವನ್ನು ಗೆಬರಿ, ಕಚ್ಚಿ ತನ್ನ ಪಾಡಿಗೆ ತಾನು ವಾಪಸ್ಸಾಗ್ತಾನೆ. ತಾಯಿ ಮಕ್ಕಳ ಪ್ರೀತಿ ವ್ಯಕ್ತ ಪಡಿಸುವ ಪರಿ ಪರರಿಗೆ ಏನೆನ್ನಿಸುತ್ತದೋ ತಿಳಿಯದು ಆದರೆ ತಾಯಂದಿರಿಗೆ ಮಾತ್ರ ಬೆಚ್ಚನೆಯ ಅನುಭವ..

ಮೊನ್ನೆ ಮೊನ್ನೆ ತಾನೆ ಹೆತ್ತಂತಿದೆ, ಅದಾಗಲೇ ಅಹನ್ ಓಡಾಡಿ ಕುಣಿದು ಮಾತಾಡುವಂತಾಗಿಬಿಟ್ಟಿದ್ದಾನೆ. ಒಮ್ಮೊಮ್ಮೆಯಂತೂ ಇಷ್ಟು ಬೇಗ ಹೇಗೆ ದಿನಗಳು ಕಳೆಯುತ್ತಿವೆ, ಅಹನ್ ನ ಅಂಬೆಗಾಲು, ಓಲಾಡುತ್ತ ಹೆಜ್ಜೆ ಇಡುವ ದಿನಗಳಿನ್ನೂ ಸರಿ ಅನುಭವಿಸಿ ಆಗಿರಲೇ ಇಲ್ಲವಲ್ಲ ಅಂತ ಪರಿತಪಿಸುವಂತಾಗುತ್ತದೆ.

ತಾಯ್ತನದ ಸುಖವನ್ನು ನೆನೆದಾಗಲೆಲ್ಲ ಪ್ರತಿ ಜನ್ಮವೂ ಹೆಣ್ಣಾಗಿಯೆ ಹುಟ್ಟುವ ಹಂಬಲ,,, ಹೊಟ್ಟೆಯಲ್ಲಿ ಹೊರುವ, ಹೆರುವ, ಬೆಳೆಸುವ ಎಲ್ಲಾ ಕ್ಷಣಗಳೂ ಅತೀ ಅಮೂಲ್ಯ ಮತ್ತು ಅಷ್ಟೇ ಸುಂದರ. ಪ್ರತಿ ಜನ್ಮದಲ್ಲೂ ತಾಯಾಗುವಂತಿದ್ದರೆ ನನಗೆಂದಿಗೂ ಮೋಕ್ಷವೇ ಬೇಡ ...

ತನಗೆ ಬೇಕೆನ್ನಿಸಿದ್ದನ್ನು ಪಡೆಯಲು ಮಾಡುವ ನಾಟಕ, ಬೆಣ್ಣೆ ಹಚ್ಚುವ ಪರಿ, ಬಿದ್ದು ಬಿದ್ದು ಅಳುವ ಆಟ ಹೆತ್ತವರಿಗೆ ಹಬ್ಬ(ಈ ಹಬ್ಬದ ಕಜ್ಜಾಯ ಕಡುಬಲ್ಲದೆ ಬೇರೇನಿದ್ದೀತು???) ಅಹನ್ ನ ಕೀಟಲೆ ಅತೀ ಆದಾಗಲೆಲ್ಲ ನನ್ನ ಅವನ ಲಡಾಯಿ ಶುರು. ಮುತ್ತು ಕೊಡು ಎಂದರೂ ಕೊಡದವ ನನ್ನ ಉರಿ ಮುಖ ಕಂಡು ಓಡಿ ಬಂದು ಮುದ್ದಿಸಿ ಮುತ್ತಿಡುತ್ತಾನೆ. ಇಷ್ಟಾದರೂ ಕೆಲವೊಮ್ಮೆ ಚೆನ್ನಾಗಿ ಅವನಿಗೆ ಏಟನ್ನು ಕೊಟ್ಟು ನಾನು ಅಳುತ್ತ ಕೂತರೆ ಅವನೇ ನನ್ನ ಅಮ್ಮ ಎಂಬಂತೆ ಓಲೈಸುತ್ತಾನೆ..

ಎಷ್ಟು ಸುಳ್ಳೋ ಎಷ್ಟು ನಿಜವೋ ತಾಯಂದಿರ ಶಾಪ, ಬೈಗುಳ ಮಕ್ಕಳಿಗೆ ತಾಗೊಲ್ಲವಂತೆ.. ಸಿಟ್ಟಿನ ಭರದಲ್ಲಿ ತಾಯಂದಿರ ಬೈಗುಳ ಹೇಗಿರುತ್ತದೆಂದರೆ ರಂಗ ಮಂಗ ಎಂಬ ಸಂಭೋದನೆ ಇದೇ ಬಾಯಿಂದ ಉದುರಿದ್ದೇ ಎಂಬ ಸಂಶಯವೂ ಬರುತ್ತದೆ. ಒಟ್ಟಿನಲ್ಲಿ ಮಕ್ಕಳು ನಮಗೆ ಸುಖ ಸಂತೋಷ ಕೊಡಲಿಕ್ಕಾಗೇ ಬರುವ ಸಾಮಗ್ರಿಗಳಲ್ಲ, ಅವರ ಆಟ-ಪಾಠ-ಹಠ ಎಲ್ಲದರಿಂದ ನಾವೇ ಇದರಲ್ಲಿ ಸಂತೋಷವನ್ನು ಕಂಡುಕೊಳ್ಳ ಬೇಕು ಎಂಬ ಆಯಿಯ ಮಾತು ನನಗೆ ಸುಸ್ತಾದಾಗಲೆಲ್ಲ ಕಿವಿಯಲ್ಲಿ ಗುಣುಗುಣಿಸುತ್ತ ನನ್ನ ಕರ್ತವ್ಯಕ್ಕೆ ಸ್ಪೂರ್ತಿ ಆಗುತ್ತದೆ...




ಅಹನ್ ನ ಇತ್ತೀಚಿನ ಭಾವ ಚಿತ್ರಗಳು..




ಅಹನ್ ಹುಡುಗಿಯಾಗಿದ್ದರೆ ಹೀಗೇ ಕಾಣುತ್ತಿದ್ದ.













































ಅಂಬೆ ಬೂಚಿ (ಆಕಳು ಮರಿ) ಎಂದರೆ ಇವನೆ ನೋಡಿ





















ತೊಪ್ಪಿ(ಟೊಪ್ಪಿ) ಹಾಕಿಕೊಂಡು ಕುಣಿಯುವುದೆಂದರೆ ಅಹನ್ ಗೆ ಬಹಳ ಇಷ್ಟ





















ತುಂಟತನ ಮಾಡಿ ಮಳ್ಳು ಮಾಡುವ ನಗು ಇದೇ..





















ತೆಂಡುಲ್ಕರ್ ಆಗ್ತೀನಿ ಅಂತ ಅಹನ್ bat ಇಲ್ಲದೆ batting ಮಾಡ್ತಾನೆ.



















ಅಹನ್ ಈಗ ಬರುವ 24 ಕ್ಕೆ(ಅಕ್ಟೋಬರ್ 24) ಎರಡು ವರ್ಷದವನಾಗುತ್ತಾನೆ.. ಅಹನ್ ನ ಜನ್ಮ ದಿನದ ಸಂಭ್ರಮ ಮನೆಯಲ್ಲಿ. ಅಹನ್ ಗೆ ದೇವರು ಒಳ್ಳೆಯ ಆಯುಷ್ಯ, ಆರೋಗ್ಯ, ವಿದ್ಯೆ, ವಿನಯವನ್ನು ಕರುಣಿಸಲಿ ಎಂಬ ಹಾರೈಕೆಯೊಂದಿಗೆ ನನ್ನ ಬ್ಲಾಗ್ ಜೀವನದ ಮೊತ್ತ ಮೊದಲ ಪೋಸ್ಟ್ ನ್ನು ಮತ್ತೊಮ್ಮೆ ಪಬ್ಲಿಶ್ ಮಾಡ್ತಿದ್ದೇನೆ..


ಇನ್ನು ಮುಂದಿನದ್ದು ಇದಾಗಲೇ ಪೋಸ್ಟ್ ಮಾಡಿದ್ದು.





ಎಲ್ಲಿಯೋ ಬೆಳೆದ ಎರಡು ಜೀವಗಳು ಗರಿಗೆದರಿ ಒಂದಾಗಿ, ಒಲವಿನಲೆಯಲ್ಲಿ ಮಿಂದು, ಪ್ರತಿ ಕ್ಷಣವೂ ಹೊಸ ಪುಟವಾಗಿ ತೆರೆದು, ತೆರೆ ಮರೆಯ ಮುಖಗಳು ಒಂದೊಂದಾಗಿ ಪರಿಚಿತವಾಗಿ, ಅದು ನಗುವಾಗಿ, ಮುನಿಸಾಗಿ, ನಲ್ಮೆಯ ಕನಸಾಗಿ ದಾಂಪತ್ಯದ ನೆಲದಲ್ಲಿ ಹಬ್ಬಿ ಹರಡಿದ ಬಳ್ಳಿಗೆ ಒಂದು ಹೂವಷ್ಟೇ ಕಡಿಮೆ ಎನ್ನಿಸಿತು.



ಜಗತ್ತಿನಲ್ಲಿರುವ ಸಿಹಿಯೆಲ್ಲ ಒಂದಾಗಿ, ನಗುವಲ್ಲಿ ಹೊರಳಾಡಿ, ಅಮ್ರತವನುಂಡು ಕಡೆಗೆ ನಮಗಾಗಿ, ಬದುಕಾಗಿ ಬಂದವನೇ ಅಹನ್.

ಅಹನ್ ಎಂದರೆ ಸೂರ್ಯ(ಅಹನಿ ಎಂದರೆ ಹಗಲು), ನಾಶವಿಲ್ಲದವನು ಎಂದು




ಇವನೇ ನಮ್ಮ ಕಂದ ನೀಲಿ ಕಂಗಳ ಅಹನ್






ಸ್ನಾನ ಮಾಡಿಸಿ ಜೊಗುಳ ಹಾಡಿದ್ರೂ ಮಲ್ಗಲ್ಲ ಅಂತ ನಗ್ತಾನೆ..






ಅಹನ್ ಪಿಯಾನೊ ನುಡಿಸಿದ್ದು ೫ನೇ ತಿಂಗಳಲ್ಲಿ






ನನಗೂ ಹೊಸತು, ಅಹನ್ ಗಂತೂ ಎಲ್ಲವೂ ಹೊಸತು, ಇಬ್ಬರೂ ಕಲಿಯತೊಡಗಿದೆವು ಜೊತೆಯಾಗಿ. ನಾನು ಅವನ ಗುರು,
ಅವ ನನ್ನ ಗುರು.




ಅಡಿಗೆ ಮಾಡೋಕೂ ತುಂಬಾನೇ ಹೆಲ್ಪ್ ಮಾಡ್ತಾನೆ ಅಹನ್






ಸ್ನಾನ ಆದ್ಮೇಲೆ ದೇವರ ಪೂಜೆ ಮಾಡದೆ ಇರೋಕಾಗತ್ತ?





ಅಮ್ಮ ಬೈತಾಳೆ ಅಂತ ಸುಳಿವು ಸಿಕ್ಕಿದ್ರೆ ಸಾಕು, ಹೀಗೆ ಅವಿತುಕೊಳ್ತನೆ ತುಂಟ







ಅಮ್ಮನಾದ ಮೇಲೆ ನನಗೆ ನನ್ನ ಆಯಿಯ(ಅಮ್ಮ) ಮೇಲಿನ ಪ್ರೀತಿ ಇನ್ನೂ ಹೆಚ್ಚಾಗಿದೆ, ಅಬ್ಬಬ್ಬ ನನ್ನ ಆಯಿಯೂ
ನನ್ನನ್ನು ಎಷ್ಟೆಲ್ಲಾ ಸಹಿಸಿದ್ದಳು.. ನಿದ್ರೆ ಇಲ್ಲದೆ, ಹಸಿವೋ, ಬಾಯಾರಿಕೆಯೋ, ಬೆನ್ನು ನೋವೋ.. ಊಹೂ೦ ಒಂದೂ ನೋಡದೆ ಬರೀ ತೂಕಡಿಸಿ ಕಳೆದ ರಾತ್ರಿಗಳೆಷ್ಟೋ?? ಸ್ವತಹ ತಂದೆ ತಾಯಿಗಳಾಗುವವರೆಗೂ ತಂದೆ ತಾಯಿಯ ಪ್ರೀತಿ
ಮಕ್ಕಳಿಗೆ ಅರಿವಾಗದಂತೆ,, ಹೌದೆನ್ನಿಸುತ್ತಿದೆ ಈಗ.


ಕೋಪ ನುಂಗಿ ಹೊಟ್ಟೆ ತೊಂಬಿಸಿಕೊಳ್ಳುವ, ನೋವಾದರೂ ನಗುವ ಕಲೆಯನ್ನೆಲ್ಲ ನನಗೆ ಕಲಿಸಿದವನು ನನ್ನ ಮಗ ಅಹನ್.
ಅವನ ತುಂಟತನ ನೋಡಿದಾಗೆಲ್ಲ
" ಇವನು ೯ ತಿಂಗಳು ನನ್ನ ಹೊಟ್ಟೆಯಲ್ಲಿ ಅದು ಹೇಗೆ ಸುಮ್ಮನೆ ಕುಳಿತಿದ್ದನೋ" ಅಂತ ಅನ್ನಿಸುತ್ತದೆ.




ಎಂದೂ ಮಾಸದ ನಗು





ಎಲ್ರೂ ಇವನನ್ನ ನಗೆ ಬುಗ್ಗೆ ಅಂತಾನೆ ಕರ್ಯೋದು






ಡ್ರೆಸ್ ಮಾಡ್ಕೊಂಡು ಕುಣಿಯೋದು, ವಾಕಿಂಗ್ ಹೋಗೋದು ಅಂದ್ರೆ ಜೀವ ಇವನಿಗೆ.






ನಮ್ಮ ನಮ್ಮ ಶಿಶುತನ, ಬಾಲ್ಯವನ್ನು ಬದುಕಿದವರು ನಾವೇ ಆದರೂ ಏನೇನೂ ನೆನಪಿರದ ಆದರೆ ನೆನಪಿನಲ್ಲಿಟ್ಟುಕೊಳ್ಳಲೇ ಬೇಕಾದ ಎಷ್ಟೋ ಘಟನೆಗಳನ್ನು ಅಹನ್ ದಿನ ನಿತ್ಯ ತೋರಿಸುತ್ತಲಿರುತ್ತಾನೆ.
ಕಕ್ಕ ಮಾಡಿಕೊಂಡು ಕಲೆದು ಅದನ್ನೇ ಬಾಯಿಗಿಟ್ಟುಕೊಂಡು ವ್ಯಾ ಎಂದಾಗ "ಅಯ್ಯೋ ನಾವೂ ಹೀಗೇ ಮಾಡಿದ್ದೆವಾ"
ಅಂತ ನಗುವೂ ಬರುತ್ತದೆ.





ಸ್ಕೂಲ್ ಗೆ ಹೋಗೋಕೆ ಈವಾಗ್ಲಿಂದಾನೆ ರಿಹರ್ಸಲ್ ನಡ್ಸಿದಾನೆ ಅಹನ್..






ಅಹನ್ ಕಣ್ಣಾಮುಚ್ಚಾಲೆ ಆಡೋದು ಹೀಗೆ...






ಅಹನ್ ನೀನು ಚೈತನ್ಯದ ಚಿಲುಮೆ..

ಓ ಅಹನ್, ನೀನು ನನಗೆ ಉಣ್ಣಿಸುತ್ತಿರುವ ತಾಯ್ತನದ ಸುಖಕ್ಕೆ ನಾನು ಚಿರಋಣಿ ಕಣೋ...