
ಮಗನಿಗೊಂದು ಪತ್ರ.
ಮಗೂ,
ಮುಂದೆಂದೂ ಬರೆಯಲಾಗದೇನೋ ಎನ್ನಿಸಿ ನಿನಗೆ ಈ ಪತ್ರವನ್ನು ಈಗಲೇ ಬರೆತ್ತಿದ್ದೇನೆ. ನನ್ನ ಜೀವವೇ ನೀನಾಗಿರುವಾಗ ಎದುರಿಗೆ ನೀ ನಿಂತು ಕೇಳಿದರೂ ಮಾತಲ್ಲಿ ನಾ ಹೇಳಬಲ್ಲೆ ಎಂಬ ನಂಬಿಕೆ ಇಲ್ಲದ ಕೆಲವು ಭಾವನೆಗಳನ್ನ ಪತ್ರದಲ್ಲಿ ಬರೆದಿರುವೆ. ಸಾವಧಾನವಾಗಿ ಓದಿಕೋ. ದೇವರು ನಿನಗೆ ಒಳ್ಳೆಯ ಆಯುಷ್ಯ, ಆರೋಗ್ಯ, ನೆಮ್ಮದಿ ಕೊಟ್ಟು ಕರುಣಿಸಲಿ
ಪಕ್ಕದಲ್ಲೇ ಮಲಗಿರುವ ನಿನ್ನ ಚಿಣಕಿ ಪಿಣಕಿ ಬೆರಳುಗಳು, ಮೆತ್ತನೆಯ ಗಂಧದ ಬಣ್ಣದ ನಿನ್ನ ಮೈ ಕೈ, ಹಲ್ಲುಜ್ಜಲೂ ಬಿಡದೆ ಹಳದಿಗಟ್ಟಿಸಿಕೊಂಡಿರುವ ಹಲ್ಲು, ಎಷ್ಟೇ ಆಡಿ ಕುಣಿದರೂ ದಣಿಯದ ಆ ಪುಟ್ಟ ಕಾಲ್ಗಳು, ಕೆನ್ನೆ ಮೇಲೆ ಇನ್ನೂ ಆರದೆ ಉಳಿದಿರುವ ಎರಡು ಬಿಂದು ಕಣ್ಣೀರು, ಕೆಂದುಟಿಗಂಟಿರುವ ಹನಿ-ಹನಿ ಹಾಲು.... ಮಲಗೆನೆಂದು ಅತ್ತೂ ಅತ್ತೂ ಬಳಲಿ ಮಲಗಿದೆಯಲ್ಲ ಕಂದ!! ನಿನ್ನ ತುಂಟತನ ಸಹಿಸಲಾಗದೆ ನಾ ನಿನಗೆ ಬೈದಾಗಲೆಲ್ಲ ಏನೂ ಅರಿಯದವನಂತೆ ಮಿಕ ಮಿಕ ಕಣ್ಣಗಲಿಸಿ ಬೆದರಿದ ಹರಿಣಿಯಂತೆ ನನ್ನುಸಿರ ಬಿಸಿಗೆ ಬೆಚ್ಚಗಾಗೋಣವೆಂದು ಓಡಿ ಬಂದು ನನ್ನ ತಬ್ಬುವೆಯಲ್ಲ ಕಂದ,, ನಿನ್ನದು ಅದೆಂತಹ ಪ್ರೀತಿ! ಅಮ್ಮನ ಮಡಿಲೇ ಹಾಗೆ ಎಲ್ಲಿಯೂ ಸಿಗದ ಶಾಂತಿ, ನೆಮ್ಮದಿ, ಸುರಕ್ಷಿತತೆಯ ಭಾವ.. ಎಲ್ಲವನ್ನೂ ನೀಡುತ್ತದೆ.
ನಿನ್ನಂತೆಯೇ ನಾನೂ ಇದ್ದೆನಂತೆ ಪುಟ್ಟ ಕೈ, ಕಾಲು, ಬಾಯಿ..ಎಲ್ಲಾ. ನನ್ನ ಆಯಿಯ ಸೆರಗಂಚು ಹಿಡಿದು ಭಯ ಅಂತ ನಿನ್ನೆ ಮೊನ್ನೆವರೆಗೂ ಓಡಾಡಿಕೊಂಡಿದ್ದೆ. ಇಂದು ಹೆದರದಿರೆಂದು ನಿನ್ನನ್ನು ನನ್ನ ತೆಕ್ಕೆಯಲ್ಲಿ ಭದ್ರವಾಗಿರಿಸಿಕೊಂಡು ಓಲೈಸುವಷ್ಟಾಗಿಬಿಟ್ಟಿದ್ದೇನೆ,, ನೆನ್ನೆವರೆಗೂ ಎಲ್ಲಿತ್ತೋ ಈ ತಾಯ್ತನ! ನನ್ನ ಆಯಿಯ ಕಣ್ಣಿಗೆ ನಾನು ಅಶಿಸ್ತೆಂದು ಕಂಡಾಗೆಲ್ಲ "ನೀನೂ ಒಂದು ಹೆಣ್ಣಾ" ಅಂತ ಬೈದಾಗ ನಕ್ಕು ಮೈ ಕೊಡವಿ ಬರುತ್ತಿದ್ದೆ. ಈಗ ಯಾರಾದರೂ "ನೀನೂ ಒಂದು ತಾಯೀನಾ" ಎಂದುಬಿಟ್ಟಾರೆಂದು ನಿನ್ನಾರೈಕೆಯಲ್ಲಿ ಅಚ್ಚುಕಟ್ಟಾಗಿಬಿಟ್ಟಿದ್ದೇನೆ..
ಪೋರಾ,, ಹೀಗೆ ದಿನ ಕಳೆವುದು.., ಅರಿವಿಲ್ಲದೊಂದು ದಿನ ನಿನಗೆ ಕುಡಿ ಮೀಸೆಯೂ ಚಿಗುರುವುದು. ಒಡೆದ ದನಿಯಲ್ಲಿ ಅಮ್ಮಾ ಎಂದು ಕರೆದಾಗ ಕಂದಾ ಎಂದು ಕೆನ್ನೆಗೆ ಮುದ್ದಿಸಲೇ ಎಂಬ ಸಂದಿಗ್ಧತೆ ನನಗೂ ಬರಬಹುದು. ಅದಾಗಲೇ ನೀನು ತನ್ನ ಖಾಸಗಿ ಎಂಬ ಗೋಡೆಯ ಹಿಂದಿನಿಂದ ಇರಮ್ಮಾ ಎಂದು ನಾ ಕರೆದರೂ ನೀ ಬಾರದೆಯೂ ಇರಬಹುದು..
ನೀನು ಈಗ ಒಲ್ಲೆ, ಆಗ ಒಲ್ಲೆ ಎಂದು ರಾಗವೆಳೆದರೂ ನಿನ್ನೊಲವಿಗೊಪ್ಪುವ ಕನ್ಯೆ ನನ್ನ ಸೊಸೆಯಾಗಿ ಬಂದಾಗಲೇ ಈ ಜೀವಕ್ಕೆ ತಂಪು. ಮಗ ಸೊಸೆ ಗುಸು-ಗುಸು ಮಾತಾಡಿಕೊಂಡು ನಕ್ಕಾಗ, ಮನೆ ತುಂಬಿದವಳ ಬಳೆ ಕೋಣೆಯೊಳಗೆ ವಿನಾಕಾರಣ ಘಲ್ ಘಲ್ ಎಂದಾಗ ನನಗೆಷ್ಟು ನೆಮ್ಮದಿಯಾಗುತ್ತೆ ಗೊತ್ತಾ ಕಂದಾ?? ನಾನೂ ಈ ಮನೆಗೆ ಒಂದು ಕಾಲದಲ್ಲಿ ಹೊಸಬಳಾಗಿಯೇ ಬಂದಿದ್ದೆನೆಂಬ ನೆನಪೆಲ್ಲ ನನಗೆ ಬಾರದೆ ಇರದು. ಮಗೂ,, ನಿನ್ನಜ್ಜ ಅಜ್ಜಿಯಂದಿರು ವಾಡಿಕೆಯಂತೆ ನಿನ್ನ ಸೊಸೆಗೆ ಎಂತಹ ಪ್ಲಾನಿಂಗೂ ಬೇಡಾ ಎಂದು ಹೆಳುವಂತೆ ನನ್ನ ಒತ್ತಾಯಿಸುವುದಂತೂ ಖಂಡಿತ.
ನಿನ್ನ ಎಲ್ಲಾ ತುಂಟತನದ ಫೋಟೊ, ಆಟಿಕೆ, ನೀನು ಮೊತ್ತ ಮೊದಲು ತೊಟ್ಟ ಬಟ್ಟೆ, ನಿನ್ನ ದೇವರ ಕೂದಲು ಉದುರಿದಾಗ ಎತ್ತಿಟ್ಟ ಆ ಸಿಕ್ಕು ಸಿಕ್ಕಿನ ಕೂದಲ ಗಂಟು, ನಿನ್ನ ತುಂಟಾಟಕ್ಕೆ ಸೋತು ಉದುರಿದ ಕಾಲ್ಗೆಜ್ಜೆಯ ಗೆಜ್ಜೆ ಗುಂಡು.. ಎಲ್ಲವನ್ನೂ ನಾನು ಭದ್ರವಾಗಿ ಎತ್ತಿಟ್ಟು ಜೋಪಾನ ಮಾಡುತ್ತಿದ್ದೇನೆ.., ನನ್ನ ಮೊಮ್ಮಕ್ಕಳಿಗೆ ಇದನ್ನೆಲ್ಲ ತೋರಿಸಿ ಕತೆ ಹೇಳಲಿಕ್ಕಾಗಿ.
ಮದುವೆಯಾದ ಮೇಲೆ ನನ್ನ ವಯಸ್ಸಿನವರೂ ನನ್ನನ್ನು ಆಂಟಿ ಎಂದಾಗ ನನಗಾದ ಮುಜುಗರ ಅಷ್ಟಿಷ್ಟಲ್ಲ, ಆದರೆ ಈಗ ಅಜ್ಜಿ ಎನಿಸಿಕೊಳ್ಳಲು ಆಗುತ್ತಿರುವ ತವಕ ಮಾತ್ರ ಹೇಳತೀರದು..
ನಿನ್ನ ಸಂಸಾರದ ವಾಸ್ತವದ ಜವಾಬ್ದಾರಿ ಶುರು ಆಗೋದು ನೀನು ಅಪ್ಪ ಎನ್ನಿಸಿಕೊಂಡಾಗಿನಿಂದ. ಮಕ್ಕಳನ್ನ ಹೆರ್ತೀಯೋ ಮಸಣಕ್ಕೆ ಹೋಗ್ತೀಯೋ ಅಂತ ನಮ್ಮನೆಗೆ ಬರುತ್ತಿದ್ದ ಕೆಲಸದ ಶಿವಮ್ಮ ಹೇಳ್ತಾ ಇರ್ತಿದ್ಲು. ಆದ್ರೆ ಪಶುವಂತೆ ಶಿಶುತನವ ಕಳೆದನಾ ಕೃಷ್ಣ ಎಂಬ ಮಾತೂ ನೆನಪಲ್ಲಿಡು. ತಲೆ ನೋವೆಂದು ಹೇಳಲಾಗದೆ ಹೊಟ್ಟೆ ನೋವಿಗೆ ಮದ್ದು ಕುಡಿವ ಮುದ್ದು ಕಂದಮ್ಮನ ಮೇಲೆ ಎಂದಿಗೂ ಅಕ್ಕರೆಯಿರಲಿ.
ನನ್ನ ದೊರೆಯೇ,, ಮೊಮ್ಮಕ್ಕಳಾಟದಲ್ಲಿ ನನ್ನ ಚರ್ಮ ಸುಕ್ಕಿದ್ದು ಮರೆಯುವುದೋ ಎನೋ?! ಹಲ್ಲುಗಳುದುರಿ ನಾನು ಅಕರಾಳ-ವಿಕರಾಳವಾಗಬಹುದು. ನೀನು ಬಳಿ ನಿಂತು ಅಮ್ಮ ಎಂದು ಕರೆದಿದ್ದೂ ಕೇಳಿಸದಷ್ಟು ಕಿವಿ ದೂರಾಗಿ ಚಾಳೀಸಿನ ನಂಬರ್ ಎರುತ್ತಾ ಹೋಗುತ್ತದೆಯಲ್ಲವೇ ನನಗೆ..? ಪಕ್ಕದ ಕೇರಿಯ ಮಾಯಬ್ಬೆಗೆ ಅರುಳು ಮರುಳಂತೆ ಎರಡು ತಿಂಗಳಿನಿಂದ. ಈ ಲೋಕದ ಖಬರ್ರೇ ಇರೊಲ್ವಂತೆ. ಮಿಮ್ಮಕ್ಕಳ ಬರುವು ಹಾಯುವ ವಯಸ್ಸಲ್ಲಿ ತನ್ನ ಮಗನಿನಿಗೇಂತ ತೊಟ್ಟಿಲು ಕಟ್ಟಿ ಜೋಗುಳ ಹಾಡ್ತಾಳಂತೆ. ಬರುವ ಜಾತ್ರೆಗೆ ಹೊಸ ಲಂಗ ತಗೋಬೇಕಂತ ದುಡ್ಡೂ ಜಮಾ ಮಾಡ್ತಿದಾಳಂತೆ..!! ಯಾರ್ಯಾರ ಕಾಲ ಹೇಗೋ ತಿಳಿಯದು. ಸುಖದ ಮರಣವನ್ನೂ ಕೇಳಿ ಬಂದಿರ ಬೇಕು. ನನ್ನ ಕತ್ತಿನಲ್ಲಿ ತಾಳಿ ತೂಗಿದಾಗಿಂದ ತುಪ್ಪದ ದೀಪ ಹಚ್ಚಿ ಮುತ್ತೈದೆಯಾಗಿ ಸಾಯುವ ಭಾಗ್ಯ ನನ್ನದಾಗಲಿ ಎಂದು ಬೇಡಿದ್ದು ಸಾರ್ಥಕವಾಗಲಿ ಎಂದು ನೀನೂ ಪ್ರಾರ್ಥಿಸು ಕಂದಾ. ಹೆತ್ತವರು ವಯಸ್ಸಾಗಿ ಎಷ್ಟೇ ನಮೆಯುತ್ತಿದ್ದರೂ ಮಕ್ಕಳಿಗೆ ಹೆತ್ತವರ ಸಾವನ್ನು ಪ್ರಾರ್ಥಿಸುವುದು ಸುಲಭವಲ್ಲ ಅಲ್ಲವಾ?? ನಾನಿಲ್ಲವಾದಾಗ ನನಗಿಂತ ಅತಿಯಾಗಿ ನಿನ್ನನ್ನು ಪ್ರೀತಿಸಿದ ನಿನ್ನ ತಂದೆಗೆ ಎಂತಹ ನೋವು ಆಗದಂತೆ ಕಾಪಾಡಿಕೊಂಡರೆ ನನಗದೇ ಭಾಗ್ಯ.
ಮುಪ್ಪು ಮನುಷ್ಯರ ಶತ್ರು ಕಣೋ,, ಬರೀ ರೋಗದ ಭೀತಿ, ನಿರ್ಲಕ್ಷ್ಯಕ್ಕೊಳಗಾಗಬಹುದೆಂಬ ಆತಂಕದ ಗೂಡು ಅದು. ಅವಲಂಬಿಸಿ ಬದುಕಲೂ ಕಷ್ಟವಾಗುವ ಅತ್ತ ಸಾಯಲೂ ಆಗದ ಸ್ಥಿತಿ. ಎಂತಹ ರೋಗವೂ ಬಾಧಿಸದೆ ನಿನ್ನ ಹೆತ್ತರಿಗೆ ಸುಖದ ಸಾವು ಬರಲೆಂದುಕೋ ಮಗನೇ.. ನಮಗೆ ಜಾಡ್ಯವಂಟಿದರೆ ನಿನಗೆಷ್ಟು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ತೊಂದರೆಯಾಗಬಹುದೇನೋ ಎಂಬ ಆತಂಕ ನನಗೆ. ಆ ಕಾಲಕ್ಕೆ ದಯಾ ಮರಣವೆನ್ನುವುದು ನಮ್ಮ ದೇಶದಲ್ಲೂ ಜಾರಿಗೆ ಬಂದಿದ್ದರೆ ಒಂದು ರೀತಿಯಲ್ಲಿ ಮುಪ್ಪಿನಲ್ಲೂ ದಿನ ದೂಡಲು ಧೈರ್ಯ ಮತ್ತು ನೆಮ್ಮದಿ ಇರುತ್ತಿತ್ತು.
ಎಷ್ಟೋ ಜನ್ಮದ ಋಣಾನುಬಂಧದಿಂದ ನಾವು ಹೀಗೆ ಸಂಬಂಧ ಹೊಂದಿ ಸಂಧಿಸುತ್ತೇವಂತೆ.., ನನ್ನ ನಲ್ಮೆಯ ಗಂಡನಿಗೆ ಹೆಂಡತಿಯಾಗಿ, ನಿನ್ನಂತಹ ಅಕ್ಕರೆಯ ಕಂದನಿಗೆ ಬರುವ ಜನ್ಮದಲ್ಲಿಯೂ ಅಮ್ಮನಾಗುವ ಆಸೆ ಕಣೋ. ನನ್ನ ತಾಳ್ಮೆ ಮೀರಿದಾಗ ನಿನ್ನ ತಪ್ಪಿಲ್ಲದೆಯೂ ನೀನು ನನ್ನಿಂದ ಶಿಕ್ಷೆಗೊಳಗಾಗಿರಬಹುದು,,, ನನ್ನಂತಹ ಅಮ್ಮಂದಿರ ಸಹವಾಸ ಸಾಕು ಎಂದು ನಿನಗೆ ಯಾವತ್ತಾದರೂ ಎನ್ನಿಸಬಹುದು.. ಆದರೆ ಮಗೂ ಯಾವದನ್ನೂ ಮನಸ್ಸಿಗೆ ತಗೊಳ್ಳದೆ ನನ್ನ ಮುಂದಿನ ಜನ್ಮದಲ್ಲೂ ನೀ ನನಗೆ ಮಗನಾಗಿ ಬರುವೆ ಎಂದು ಸುಳ್ಳಾದರೂ ಒಮ್ಮೆ ಆಶ್ವಾಸನೆ ಕೊಟ್ಟುಬಿಡೋ. ಸಾಯುವ ಈ ಜೀವಕ್ಕೆ ಸಾವೂ ಒಂದು ಆಶಾ ಕಿರಣದಂತೆ ಕಾಣಬಹುದು....
ಇಂತಿ ನಿನ್ನ
ಅಮ್ಮ.